ಗ್ಯಾಂಗ್‌ಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡುತ್ತಿದ್ದ 26 ಮಂದಿಯನ್ನು ಬಂಧಿಸಿದ ಪೊಲೀಸರು

Update: 2023-02-04 12:39 GMT

ಜೈಪುರ್: ಗ್ಯಾಂಗ್‌ಸ್ಟರ್‌ಗಳಾದ ರೋಹಿತ್‌ ಗೊಡಾರ (Rohit Godara) ಮತ್ತು ರಿತಿಕ್ ಬಾಕ್ಸರ್‌ (Ritik Boxer) ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡಿ ಅವರ ಪೋಸ್ಟ್‌ಗಳನ್ನು ಲೈಕ್‌ ಮಾಡಿದ್ದ 26 ಮಂದಿಯನ್ನು ನಗರದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಪ್ರಮುಖವಾಗಿ  ಈ ಇಬ್ಬರು ಗ್ಯಾಂಗ್‌ಸ್ಟರ್‌ಗಳ ಎರಡು ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಲೈಕ್‌ ಮಾಡಿ ಶೇರ್‌ ಮಾಡಿದವರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ (ಅಪರಾಧ) ಅಜಯ್‌ ಪಾಲ್‌ ಲಾಂಬ ಹೇಳಿದ್ದಾರೆ.

"ಕಳೆದ ಶನಿವಾರ ಡೇಸ್‌ ಹೋಟೆಲ್‌ನಲ್ಲಿ ನಡೆದ ಗುಂಡಿನ ದಾಳಿಯ ತಕ್ಷಣ ಬಾಕ್ಸರ್‌ ಸಾಮಾಜಿಕ ಜಾಲತಾಣದಲ್ಲಿ ಅದಕ್ಕೆ ಹೊಣೆ ಹೊತ್ತುಕೊಂಡಿದ್ದ. ಇನ್ನೊಂದು ಪೋಸ್ಟ್‌ನಲ್ಲಿ ತನ್ನ ಜನರ ಮೇಲೆ ಗುಂಡಿಕ್ಕಿದ ಪೊಲೀಸರ ಮೇಲೆ ಪ್ರತೀಕಾರ ತೀರಿಸುವುದಾಗಿ ಆತ ಪಣ ತೊಟ್ಟಿದ್ದ. ಈ ಎರಡೂ ಪೋಸ್ಟ್‌ಗಳು ಅಪಾಯಕಾರಿಯಾಗಿದ್ದವು ಹಾಗೂ ಸಮಾಜದಲ್ಲಿ ಆತಂಕ ಸೃಷ್ಟಿಸುವಂತಹ ಪೋಸ್ಟ್‌ಗಳಾಗಿದ್ದವು," ಎಂದು ಲಾಂಬ ಹೇಳಿದ್ದಾರೆ.

ಗ್ಯಾಂಗ್‌ಸ್ಟರ್‌ಗಳನ್ನು ಆನ್‌ಲೈನ್‌ನಲ್ಲಿ ಫಾಲೋ ಮಾಡುವುದು ಅಥವಾ ಅವರನ್ನು ಬೆಂಬಲಿಸುವುದರ ವಿರುದ್ಧ ನಗರ ಪೊಲೀಸರು ಸಾರ್ವಜನಿಕರಿಗೆ ಈಗಾಗಲೇ ಕಠಿಣ ಎಚ್ಚರಿಕೆ ನೀಡಿದ್ದರು.

ಬಂಧಿತರನ್ನು ನಗರದ ವಿವಿಧ ಠಾಣೆಗಳಲ್ಲಿರಿಸಲಾಗಿದೆ. ಒಬ್ಬ ಶೂಟರ್‌ ಅಂತೂ ಬಾಕ್ಸರ್‌ನನ್ನು ಸಾಮಾಜಿಕ ಜಾಲತಾಣದ ಮೂಲಕ ಭೇಟಿಯಾಗಿದ್ದನೆನ್ನಲಾಗಿದೆ.

ಬಂಧಿತರಿಗೆ ಗ್ಯಾಂಗ್‌ಸ್ಟರ್‌ಗಳೊಂದಿಗೆ ಯಾವುದೇ ರೀತಿಯ ನಂಟಿದೆಯೇ ಎಂದು ತಿಳಿಯಲು ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.

"ಕಳೆದ ಎರಡು ತಿಂಗಳುಗಳಲ್ಲಿ ಗ್ಯಾಂಗ್‌ಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡುತ್ತಿದ್ದ 300 ಮಂದಿಯನ್ನು ಠಾಣೆಗೆ ಬರ ಹೇಳಿ ನಂತರ ಅವರ ಮೇಲೆ ನಿಗಾ ಇಡಲು ಅವರ ಕುಟುಂಬಗಳಿಗೆ ಸೂಚಿಸಿ ಅವರನ್ನು ಬಿಟ್ಟುಬಿಡಲಾಗಿತ್ತು," ಎಂದು ಲಾಂಬ ಹೇಳಿದ್ದಾರೆ.

ಶುಕ್ರವಾರ ಬಂಧಿತರಾದವರಲ್ಲಿ ಹೆಚ್ಚಿನವರು ಗ್ಯಾಂಗ್‌ಸ್ಟರ್‌ಗಳೊಂದಿಗೆ ನಿಯಮಿತವಾಗಿ ಆನ್ ಲೈನ್‌ ಮೂಲಕ ಸಂಪರ್ಕದಲ್ಲಿದ್ದರು ಎಂದು ತಿಳಿಸಿದ ಪೊಲೀಸರು ಯುವಜನರು ಅವರಿಂದ ಪ್ರೇರಿತರಾಗುವುದನ್ನು ತಡೆಯಬೇಕಿದೆ ಎಂದಿದ್ದಾರೆ.

ಬಾಕ್ಸರ್‌ ಮತ್ತು ಗೊಡಾರ ಇಬ್ಬರೂ ಯುವಕರನ್ನು ಕ್ರಿಮಿನಲ್‌ ಕೃತ್ಯಕ್ಕೆ ಬಳಸುವುದರಿಂದ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನುಸರಿಸಬಾರದು ಎಂದು ತಿಳಿಸಿದ ಪೊಲೀಸರು ಈ ಇಬ್ಬರು ಗ್ಯಾಂಗ್‌ಸ್ಟರ್‌ಗಳ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ಬಂಧಿಸುವಂತೆ ಸಂಬಂಧಿತ ಕಂಪೆನಿಗಳನ್ನು ಕೇಳಿಕೊಳ್ಳಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ನ್ಯುಮೋನಿಯಾದಿಂದ ಬಳಲುತ್ತಿದ್ದ ಮಗುವಿಗೆ ನಕಲಿ ವೈದ್ಯನಿಂದ ಕಬ್ಬಿಣದ ರಾಡಿನಿಂದ ಬರೆ; ಮಗು ಸಾವು

Similar News