ಜಿ.ಶಂಕರ್‌ಗೆ ಕರುನಾಡ ಕರುಣಾಳು ಬಿರುದಿನೊಂದಿಗೆ ರಂಗಭೂಮಿ ಪ್ರಶಸ್ತಿ ಪ್ರದಾನ

Update: 2023-02-04 14:50 GMT

ಉಡುಪಿ: ಉಡುಪಿ ರಂಗಭೂಮಿ ವತಿಯಿಂದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಾಲ್ಕು ದಿನಗಳ ನಡೆದ ರಂಗಭೂಮಿ ರಂಗೋತ್ಸವದಲ್ಲಿ ಆರೋಗ್ಯ, ಶಿಕ್ಷಣ, ಸಾಮಾಜಿಕ, ಧಾರ್ಮಿಕ ಸಹಿತ ವಿವಿಧ ಕ್ಷೇತ್ರಕ್ಕೆ ನೀಡಿದ ಕೊಡುಗೆ ನೀಡಿದ ನಾಡೋಜ ಡಾ.ಜಿ. ಶಂಕರ್ ಅವರಿಗೆ ಕರುನಾಡ ಕರುಣಾಳು ಬಿರುದಿನೊಂದಿಗೆ ರಂಗಭೂಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಯಾವುದೇ ಪ್ರತಿಫಲವನ್ನು ಬಯಸದೇ ಮಾಡುವ ಕಾರ್ಯ ನಿಜವಾದ ಸಮಾಜ ಸೇವೆಯಾಗಿದೆ. ಜನ ಪ್ರತಿನಿಧಿಗಳದ್ದು ಕರ್ತವ್ಯವೇ ಹೊರತು ಸೇವೆಯಾಗುವುದಿಲ್ಲ. ಯಾವುದೇ ಸಂಘಟನೆಗಳು ಸ್ಥಳೀಯ ಕಲಾವಿದರಿಗೆ ಮೊದಲು ಮನ್ನಣೆ ನೀಡಬೇಕು. ಸ್ಥಳೀಯ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಬೇಕು ಎಂದರು.

ಮಣಿಪಾಲ ಮಾಹೆ ಸಹಕುಲಾಧಿಪತಿ, ರಂಗಭೂಮಿ ಉಡುಪಿ ಗೌರವಾಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್, ಗೀತಾನಂದ ಫೌಂಡೇಶನ್ ಸಂಚಾಲಕ ಆನಂದ ಸಿ. ಕುಂದರ್, ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ರಾಜೇಂದ್ರ ಹಿರಿಯಡ್ಕ, ರಂಗಭೂಮಿ ಉಪಾಧ್ಯಕ್ಷರಾದ ಭಾಸ್ಕರ್ ರಾವ್ ಕಿದಿಯೂರು, ಎನ್.ಆರ್. ಬಲ್ಲಾಳ್, ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.

ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ರಂಗಭೂಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಡಾ.ಜಿ.ಶಂಕರ್ ಅವರ ಬದುಕು ಛಾಯಾಚಿತ್ರ ಪ್ರದರ್ಶನವನ್ನು ಮುದ್ದಣ ಮಂಟಪದ ಬಳಿ ಆಯೋಜಿಸಲಾಗಿತ್ತು.

Similar News