2022ರಲ್ಲಿ 50 ಸರಕಾರಿ ವೆಬ್​​ಸೈಟ್​ ಗಳಿಗೆ ಕನ್ನ, ಎಂಟು ಡಾಟಾ ಉಲ್ಲಂಘನೆ: ಐಟಿ ಸಚಿವ ವೈಷ್ಣವ್‌

Update: 2023-02-04 15:21 GMT

ಹೊಸದಿಲ್ಲಿ, ಫೆ.4: ಕೇಂದ್ರ ಸಂವಹನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ ಅವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ, 2022-23ನೇ ಸಾಲಿನಲ್ಲಿ 50 ಸರಕಾರಿ ವೆಬ್ ಸೈಟ್‌ಗಳನ್ನು  ಹ್ಯಾಕ್ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.

2020ರಿಂದ ಕೇಂದ್ರ ಸಚಿವಾಲಯಗಳು/ಇಲಾಖೆಗಳು ಮತ್ತು ರಾಜ್ಯ ಸರಕಾರಗಳ ವೆಬ್‌ಸೈಟ್‌ಗಳ ಹ್ಯಾಕಿಂಗ್ ಕುರಿತು ವರ್ಷವಾರು ವಿವರಗಳನ್ನು ಕೇಳಿದ್ದ ಸಿಪಿಐ ಸಂಸದ ಬಿನೋಯ್ ವಿಶ್ವಂ ಅವರ ಪ್ರಶ್ನೆಗೆ ಸಂಬಂಧಿಸಿದಂತೆ ಸಚಿವರು ಶುಕ್ರವಾರ ಈ ಮಾಹಿತಿ ನೀಡಿದರು. ಇಂಡಿಯನ್ ಕಂಪ್ಯೂಟರ್ ಎಮರ್ಜನ್ಸಿ ರಿಸ್ಪಾನ್ಸ್ ಟೀಮ್ (ಸಿಇಆರ್ಟಿ-ಇನ್)ನ ವರದಿಯಂತೆ 2020,2021 ಮತ್ತು 2022ನೇ ಸಾಲುಗಳಲ್ಲಿ ಕೇಂದ್ರ ಸಚಿವಾಲಯಗಳು/ಇಲಾಖೆಗಳು ಮತ್ತು ರಾಜ್ಯ ಸರಕಾರಗಳ ಅನುಕ್ರಮವಾಗಿ ಒಟ್ಟು 59,42 ಮತ್ತು 50 ವೆಬ್ಸೈಟ್ಗಳನ್ನು ಹ್ಯಾಕ್ ಮಾಡಲಾಗಿತ್ತು ಎಂದರು.

ಸಿಇಆರ್ಟಿ-ಇನ್ ಈ ಮೂರು ವರ್ಷಗಳಲ್ಲಿ ಅನುಕ್ರಮವಾಗಿ 2,83,581;4,32,057;3,24,620 ದುರುದ್ದೇಶಪೂರಿತ ಸ್ಪಾಮ್ಗಳನ್ನು ಪತ್ತೆ ಹಚ್ಚಿದೆ ಮತ್ತು ತಡೆಗಟ್ಟಿದೆ ಎಂದೂ ಸಚಿವರು ತಿಳಿಸಿದರು. 

ಸಿಇಆರ್ಟಿ-ಇನ್ಗೆ ವರದಿಯಾಗಿರುವ ಮಾಹಿತಿಯಂತೆ 2020,2021 ಮತ್ತು 2022ನೇ ಸಾಲುಗಳಲ್ಲಿ ಸರಕಾರಿ ಸಂಸ್ಥೆಗಳಿಗೆ ಸಂಬಂಧಿಸಿದ ಅನುಕ್ರಮವಾಗಿ 6,7 ಮತ್ತು 8 ಡಾಟಾ ಉಲ್ಲಂಘನೆ ಘಟನೆಗಳು ನಡೆದಿವೆ ಎಂದು ತಿಳಿಸಿದ ವೈಷ್ಣವ,ಹೊರಗಿನಿಂದ ಮತ್ತು ದೇಶದ ಒಳಗಿನಿಂದ ಭಾರತೀಯ ಸೈಬರ್‌ಸ್ಪೇಸ್‌ನ ಮೇಲೆ ದಾಳಿಯ ಪ್ರಯತ್ನಗಳು ಆಗಾಗ್ಗೆ ನಡೆದಿವೆ. ವಿಶ್ವದ ವಿವಿಧ ಭಾಗಗಳಲ್ಲಿಯ ಕಂಪ್ಯೂಟರ್ ಸಿಸ್ಟಮ್‌ಗಳ ಮೇಲೆ ಇಂತಹ ದಾಳಿಗಳು ನಡೆಯುತ್ತಿವೆ ಮತ್ತು ದಾಳಿಗಳನ್ನು ನಡೆಸುವ ನಿಜವಾದ ಕಂಪ್ಯೂಟರ್ ವ್ಯವಸ್ಥೆಗಳ ಗುರುತನ್ನು ಮರೆಮಾಚಲು ಮಾರುವೇಷದ ತಂತ್ರಜ್ಞಾನಗಳು ಮತ್ತು ಗುಪ್ತ ಸರ್ವರ್ಗಳನ್ನು ಬಳಸಲಾಗುತ್ತದೆ ಎಂದರು.

Similar News