ಮುಂಬರುವ ಚುನಾವಣೆಗಳಲ್ಲಿ ಆರ್‌ವಿಎಂ ಬಳಕೆ ಇಲ್ಲ: ಕಿರಣ್ ರಿಜಿಜು ಸ್ಪಷ್ಟನೆ

Update: 2023-02-04 15:47 GMT

ಹೊಸದಿಲ್ಲಿ, ಫೆ.4: ವಲಸಿಗರು ತಾವಿರುವ ಸ್ಥಳದಿಂದಲೇ ತಮ್ಮ ಹುಟ್ಟೂರಿನ ಕ್ಷೇತ್ರದ ಅಭ್ಯರ್ಥಿಗೆ ಮತದಾನ ಮಾಡಲು ಅವಕಾಶ ಮಾಡಿಕೊಡುವ ರಿಮೋಟ್ ಇಲೆಕ್ಟ್ರಾನಿಕ್ ಮತಯಂತ್ರ (ಆರ್‌ವಿಎಂ) (RVM) ವನ್ನು ಮುಂಬರುವ ಚುನಾವಣೆಗಳಲ್ಲಿ (Election) ಪರಿಚಯಿಸುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲವೆಂದು ಕೇಂದ್ರ ಕಾನೂನು ಸಚಿವ ಕಿರಿಣ್ ರಿಜಿಜು (Kiren Rijiju) ಶುಕ್ರವಾರ ಲೋಕಸಭೆಗೆ ತಿಳಿಸಿದ್ದಾರೆ.

ಆರ್‌ವಿಎಂ ಮತಯಂತ್ರಗಳ ಮಾದರಿಯನ್ನು ಚುನಾವಣಾ ಆಯೋಗವು ಅಭಿವೃದ್ಧಿಪಡಿಸಿದೆಯೇ ಮತ್ತು ಅದನ್ನು ಮುಂಬರುವ ಚುನಾವಣೆಗಳಲ್ಲಿ ಪರಿಚಯಿಸಲಾಗುವುದೇ ಎಂದು ಲೋಕಸಬಾ ಸಂಸದರಾದ ಆ್ಯಂಟೊ ಆ್ಯಂಟನಿ, ಗೌರವ್ ಗೊಗೊಯಿ ಕೆ.ವಿ ಸುಬ್ಬರಾಯನ್ ಹಾಗೂ ಮಾನಿಕಮ್ ಠಾಗೋರ್ ಅವರು ಕೇಳಿದ ಪ್ರಶ್ನೆ ರಿಜಿಜು ಉತ್ತರಿಸುತ್ತಿದ್ದರು.

ತ್ರಿಪುರಾ ವಿಧಾನಸಭೆಗೆ ಫೆಬ್ರವರಿ 16ರಂದು, ನಾಗಾಲ್ಯಾಂಡ್ ಹಾಗೂ ಮೇಘಾಲಯ ರಾಜ್ಯಗಳಲ್ಲಿ ಫೆಬ್ರವರಿ 27ರಂದು ಚುನಾವಣೆ ಮಾಡಲಿದೆ. 2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕರ್ನಾಟಕ, ಮಿಝೋರಾಂ, ಚತ್ತೀಸ್ಗಢ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ತೆಲಂಗಾಣದ ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ.

ಆದರೆ ಈ ಎಲ್ಲಾ ರಾಜ್ಯಗಳ ಚುನಾವಣೆಯನ್ನು ಗಣನೆಗೆ ತೆಗೆದುಕೊಂಡೇ ಕಾನೂನು ಸಚಿವರು ‘ಮುಂಬರುವ ಚುನಾವಣೆ’ ಎಂಬ ಪದವನ್ನು ಬಳಸಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ತಮ್ಮ ಮತಗಳನ್ನು ಚಲಾಯಿಸಲು ತಮ್ಮ ತವರು ಕ್ಷೇತ್ರಗಳಿಗೆ ಪ್ರಯಾಣಿಸಲು ಸಾಧ್ಯವಾಗದ ಅಂತರ್ದೇಶೀಯ ವಲಸಿಗರು ತಾವು ಇರುವ ಊರಿನಿಂದಲೇ ಮತ ಚಲಾಯಿಸಲು ಅವಕಾಶ ನೀಡುವಂತೆ ಮಾಡಲು ಆರ್ವಿಎಂಗಳನ್ನು ಬಳಸುವ ಸಾಧ್ಯತೆಯ ಬಗ್ಗೆ ತಾನು ಪರಿಶೀಲಿಸುತ್ತಿರುವುದಾಗಿ ಚುನಾವಣಾ ಆಯೋಗ ಕಳೆದ ತಿಂಗಳು ತಿಳಿಸಿತ್ತು. ಒಂದು ಆರ್ವಿಎಂ ಮತಗಟ್ಟೆಯಿಂದ 72 ವಿವಿಧ ಕ್ಷೇತ್ರಗಳ ಮತದಾನವನ್ನು ನಿರ್ವಹಿಸಬಹುದಾಗಿದೆ . ಈ ನಿಟ್ಟಿನಲ್ಲಿ ಜನವರಿ 17ರಂದು ಆರ್ವಿಎಂ ಮಾದರಿಯ ಪ್ರಾತ್ಯಕ್ಷಿಕೆಯನ್ನು ಕೂಡಾ ಪ್ರದರ್ಶಿಸುವುದಾಗಿ ತಿಳಿಸಿತ್ತು. ಆದರೆ ಪ್ರತಿಪಕ್ಷಗಳು ಆರ್ವಿಎಂ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರಿಂದ ಅದನ್ನು ಮುಂದೂಡಲಾಗಿತ್ತು.

ಸಾರ್ವಜನಿಕ ರಂಗದ ಘಟಕವಾದ ಇಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ ದೂರ ಮತದಾನಯಂತ್ರದ ಮಾದರಿಯನ್ನು ಅಭಿವೃದ್ಧಿಪಡಿಸಿದೆಯೆಂದು ರಿಜಿಜು ಶುಕ್ರವಾರ ಲೋಕಸಭೆಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ. ಆದರೆ ಪ್ರಸ್ತಾವಿತ ದೂರ ಮತದಾನ ವಿಧಾನವನ್ನು ಅನಿವಾಸಿ ಭಾರತೀಯ ಮತದಾರರಿಗೆ ಬಳಸಲಾಗುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.

Similar News