ಕಪ್ಪುಹಣ ಬಿಳುಪು ಪ್ರಕರಣ: ರಾಹುಲ್ ನಿಕಟವರ್ತಿಯಿಂದ ಟಿಎಂಸಿ ನಾಯಕನ ಖಾತೆಗೆ ಹಣ ಜಮೆ; ಈಡಿ ಆರೋಪ

Update: 2023-02-04 15:52 GMT

ಹೊಸದಿಲ್ಲಿ, ಫೆ.4: ಟಿಎಂಸಿ (TMC) ವಕ್ತಾರ ಸಾಕೇತ್ ಗೋಖಲೆ (Saket Gokhale) ಆರೋಪಿಯಾಗಿರುವ ಕಪ್ಪುಹಣ ಬಿಳುಪು ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ನಿಕಟವರ್ತಿ ಅಲಂಕಾರ್ ಸವಾಯಿ ಅವರ ಹೇಳಿಕೆಯನ್ನು ಜಾರಿ ನಿರ್ದೇಶನಾಲಯವು (ED) ಪ್ರಶ್ನಿಸಿದೆ ಹಾಗೂ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ.

ಸವಾಯಿ ಹಾಗೂ ಗೋಖಲೆ ಅವರನ್ನು ಈ ವಾರದ ಆರಂಭದಲ್ಲಿ ಮೂರು ದಿನಗಳ ಕಾಲ ವಿಚಾರಣೆ ನಡೆಸಿರುವುದಾಗಿ ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ. ಮಾಜಿ ಬ್ಯಾಂಕರ್ ಆದ ಸವಾಯಿ ಅವರು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ನಿಕಟವರ್ತಿಯಾಗಿದ್ದಾರೆ ಹಾಗೂ ಅವರ ಸಂಶೋಧನಾ ತಂಡದ ನೇತೃತ್ವವನ್ನು ವಹಿಸಿದ್ದಾರೆ.

ಆನ್ ಲೈನ್ ಕ್ರೌಡ್‌ ಫಂಡಿಂಗ್ ವೇದಿಕೆಯ ಮೂಲಕ ಸಂಗ್ರಹವಾದ ಹಣವನ್ನು ಅಕ್ರಮವಾಗಿ ಬಳಸಿಕೊಂಡ ಆರೋಪದಲ್ಲಿ ಸಾಕೇತ್ ಗೋಖಲೆ ಅವರನ್ನು ಗುಜರಾತ್ ಪೊಲೀಸರು ಇತ್ತೀಚೆಗೆ ಗುಜರಾತ್ ನಲ್ಲಿ ಬಂಧಿಸಿದ್ದರು.    

ಸುಮಾರು ಒಂದು ವರ್ಷದ ಹಿಂದೆ, ಗೋಖಲೆಯವರ ಬ್ಯಾಂಕ್ ಖಾತೆಯಲ್ಲಿ ಸವಾಯಿ ಅವರು 23.54 ಲಕ್ಷ ರೂ. ಜಮೆ ಮಾಡಿರುವ ಬಗ್ಗೆ ಗೋಖಲೆ ಅವರನ್ನು ವಿಚಾರಣೆಗೊಳಪಡಿಸಿದ್ದಾಗಿ ಇ.ಡಿ. ಅವರ ರಿಮಾಂಡ್ ಕೋರಿ ಸಲ್ಲಿಸಿದ ಮನವಿಯಲ್ಲಿ ನ್ಯಾಯಾಲಯಕ್ಕೆ ತಿಳಿಸಿತ್ತು. ಅದಕ್ಕವರು ಈ ಹಣವನ್ನು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ನಿರ್ವಹಣೆಯ ಕೆಲಸಗಳಿಗೆ ಹಾಗೂ ಇತರ ಸಮಾಲೋಚನಾ ಚಟುವಟಿಕೆಗಳಿಗೆ ಬಳಸಲು ನಗದು ರೂಪದಲ್ಲಿ ನೀಡಲಾಗಿತ್ತು ಎಂದು ತನಗೆ ತಿಳಿಸಿದ್ದಾರೆಂದು ಇ.ಡಿ. ನ್ಯಾಯಾಲಯಕ್ಕೆ ತಿಳಿಸಿತ್ತು.   ಸವಾಯಿ ಯಾಕೆ ನಗದುರೂಪದಲ್ಲಿ ಹಣವನ್ನು ಪಾವತಿಸಿದರೆಂದು ತಾನು ಗೋಖಲೆಯವರನ್ನು ಕೇಳಿದಾಗ, ಅದಕ್ಕವರು ಈ ಪ್ರಶ್ನೆಗೆ ಸವಾಯಿ ಅವರೇ ಉತ್ತರಿಸಬಲ್ಲರು ಎಂದು ಹೇಳಿದ್ದಾಗಿ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ತಿಳಿಸಿತ್ತು.

ಗೋಖಲೆಯವರು ಟಿಎಂಸಿಯ ಸದಸ್ಯರಾಗಿದ್ದ ಅವಧಿಯಲ್ಲೇ ಅವರು ಈ ನಗದು ಠೇವಣಿಗಳನ್ನು ಸ್ವೀಕರಿಸಿದ್ದಾರೆಂದು ಜಾರಿ ನಿರ್ದೇಶನಾಲಯ ಆಪಾದಿಸಿದೆ.

Similar News