ಬಾಳೆಬರೆ ಘಾಟ್: 2 ತಿಂಗಳು ವಾಹನ ಸಂಚಾರ ಬಂದ್

Update: 2023-02-04 15:56 GMT

ಉಡುಪಿ: ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟ್‌ನಲ್ಲಿ ಕಾಂಕ್ರೀಟ್ ಪೇವ್‌ಮೆಂಟ್ ಕಾಮಗಾರಿ ನಡೆಯಲಿರುವುದರಿಂದ ಫೆ.5ರಿಂದ ಮುಂದಿನ ಎಪ್ರಿಲ್ 5ರವರೆಗೆ ಎರಡು ತಿಂಗಳ ಕಾಲ ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ, ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ತಾತ್ಕಾಲಿಕ ಅಧಿಸೂಚನೆಯ ಆದೇಶವನ್ನು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಇಂದು  ಹೊರಡಿಸಿದ್ದಾರೆ.

ಶಿವಮೊಗ್ಗ ವಿಭಾಗದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಇವರ ಕೋರಿಕೆ, ಉಡುಪಿ ಜಿಲ್ಲೆಯ  ಪೊಲೀಸ್ ಅಧೀಕ್ಷಕರು ಹಾಗೂ ಉಡುಪಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವರದಿಯ ಆಧಾರದಲ್ಲಿ ಈ ಆದೇಶ ಹೊರಡಿಸಲಾಗಿದೆ.

ಆದೇಶದಲ್ಲಿ ವಾಹನಗಳು ಸಂಚರಿಸುವ ಪರ್ಯಾಯ ಮಾರ್ಗಗಳ ವಿವರಗಳನ್ನೂ ನೀಡಲಾಗಿದೆ. ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52 ರಿಂದ ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆ ಹೋಗುವ ಲಘು ವಾಹನಗಳು ಇನ್ನು ತೀರ್ಥಹಳ್ಳಿ- ಹಾಲಾಡಿ- ಬಸ್ರೂರು- ಕುಂದಾಪುರ ರಸ್ತೆಯ ಮೂಲಕ  ಅಥವಾ  ತೀರ್ಥಹಳ್ಳಿ- ಹೆಬ್ರಿ- ಉಡುಪಿ- ಕುಂದಾಪುರ ರಸ್ತೆಯ ಮೂಲಕ ಸಂಚರಿಸಬಹುದು.

ರಾಜ್ಯ ಹೆದ್ದಾರಿ-52 ರಿಂದ ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆಗೆ ಹೋಗುವ ಭಾರೀ ವಾಹನಗಳು ಇನ್ನು ಮುಂದೆ ತೀರ್ಥಹಳ್ಳಿ- ಕಾನು ಗೋಡು- ನಗರ- ಕೊಲ್ಲೂರು- ಕುಂದಾಪುರ ಮಾರ್ಗದಲ್ಲಿ (ಭಾರಿ ಸರಕು ವಾಹನಗಳು ಮಲ್ಟಿ ಎಕ್ಸೆಲ್, ಎವಿಯನ್ನು ಹೊರತುಪಡಿಸಿ)  ಸಂಚರಿಸಬಹುದು.

ತೀರ್ಥಹಳ್ಳಿ- ಯಡೂರು- ಹುಲಿಕಲ್- ಕುಂದಾಪುರ ಕಡೆ ಹೋಗುವ ಲಘು/ಭಾರಿ ವಾಹನಗಳು ತೀರ್ಥಹಳ್ಳಿ- ಯಡೂರು- ಮಾಸ್ತಿಕಟ್ಟೆ- ನಗರ- ಕೊಲ್ಲೂರು- ಕುಂದಾಪುರ ಮಾರ್ಗದಲ್ಲಿ ಸಂಚರಿಸಬಹುದು. ಇನ್ನು ಹೊಸನಗರ- ನಗರ- ಕೊಲ್ಲೂರು- ಕುಂದಾಪುರ ರಸ್ತೆಯಲ್ಲಿ ಭಾರಿ ಸರಕು ವಾಹನ, ಮಲ್ಟಿ ಎಕ್ಸೆಲ್, ಎವಿಯನ್ನು ಹೊರತುಪಡಿಸಿ ಲಘು ಸರಕು ವಾಹನಗಳ ಸಂಚಾರಕ್ಕೆ ಮಾತ್ರ ಫೆ.5ರಿಂದ ಎಪ್ರಿಲ್ 5ರವರೆಗೆ ಅವಕಾಶವಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Similar News