ಪಾಕಿಸ್ತಾನದಲ್ಲಿ ವಿಕಿಪೀಡಿಯಾಕ್ಕೆ ನಿರ್ಬಂಧ

Update: 2023-02-04 16:57 GMT

ಇಸ್ಲಮಾಬಾದ್, ಫೆ.4: ಆಕ್ಷೇಪಾರ್ಹ ಅಥವಾ ಧರ್ಮನಿಂದೆಯ ವಿಷಯಗಳನ್ನು ತೆಗೆದುಹಾಕಲು ನಿರಾಕರಿಸಿದ ಬಳಿಕ ಪಾಕಿಸ್ತಾನವು ವಿಕಿಪೀಡಿಯಾವನ್ನು ನಿರ್ಬಂಧಿಸಿದೆ ಎಂದು ಮಾಧ್ಯಮಗಳು ಶನಿವಾರ ವರದಿ ಮಾಡಿವೆ.

ಪಾಕಿಸ್ತಾನದ ಸರಕಾರ ಧರ್ಮನಿಂದೆಯ ವಿಷಯ ಎಂದು ಪರಿಗಣಿಸಿರುವ ವಸ್ತುಗಳನ್ನು ವೆಬ್ ಸೈಟ್  ತೆಗೆದುಹಾಕಲು ನಿರಾಕರಿಸಿರುವುದರಿಂದ ವಿಕಿಪೀಡಿಯಾವನ್ನು ನಿರ್ಬಂಧಿಸಲಾಗಿದೆ. ಇಂತಹ ವಿಷಯಗಳನ್ನು ತೆಗೆದುಹಾಕಿದರೆ ನಿರ್ಬಂಧ ತೆರವಿನ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಪಾಕಿಸ್ತಾನದ `ದಿ ನ್ಯೂಸ್' ವೆಬ್ ಸೈಟ್ ವರದಿ ಮಾಡಿದೆ.

ಪಾಕಿಸ್ತಾನದ ಟೆಲಿಕಾಂ ಪ್ರಾಧಿಕಾರ ವಿಕಿಪೀಡಿಯಾ ಸೇವೆಗಳನ್ನು 48 ಗಂಟೆಗಳ ಕಾಲ ಅಪಮೌಲ್ಯೀಕರಿಸಿದ್ದು, ಧರ್ಮನಿಂದೆ ಎಂದು ಪರಿಗಣಿಸಲಾದ ವಿಷಯಗಳನ್ನು ಈ ಅವಧಿಯೊಳಗೆ ತೆಗೆದುಹಾಕದಿದ್ದಲ್ಲಿ ನಿರ್ಬಂಧ ವಿಧಿಸುವುದಾಗಿ ಗಡು ನೀಡಿತ್ತು. ಈ ಗಡು ಮುಗಿಯುತ್ತಿದ್ದಂತೆಯೇ ನಿರ್ಬಂಧ ಜಾರಿಯಾಗಿದೆ. ನ್ಯಾಯಾಲಯದ ಸೂಚನೆಯಂತೆ ನಿರ್ದಿಷ್ಟ ವಿಷಯಗಳನ್ನು ತೆಗೆದುಹಾಕುವಂತೆ ಸೂಚಿಸಿ ಅವಕಾಶವನ್ನೂ ನೀಡಲಾಗಿತ್ತು. ಆದರೆ ಈ ಬಗ್ಗೆ ವಿಕಿಪೀಡಿಯಾದಿಂದ ಪ್ರತಿಕ್ರಿಯೆ ಇಲ್ಲದ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯವಾಗಿದೆ ಎಂದು ಪ್ರಾಧಿಕಾರ ಟ್ವೀಟ್ ಮಾಡಿದೆ.

ಪಾಕ್ ಸರಕಾರದ ಕ್ರಮ ಅಸಾಂವಿಧಾನಿಕ, ಅಸಮಾನ ಮತ್ತು ಹಾಸ್ಯಾಸ್ಪದ. ಈ ಕ್ರಮವು ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಸಂಶೋಧಕರು ಹಾಗೂ ಸಮಾಜದ ಇತರ ವರ್ಗದವರ ಮೇಲೆ ಪರಿಣಾಮ ಬೀರಲಿದೆ ಎಂದು ಡಿಜಿಟಲ್ ಹಕ್ಕುಗಳ ಕಾರ್ಯಕರ್ತ ಉಸಾಮಾ ಖಿಲ್ಜಿ ಟೀಕಿಸಿದ್ದಾರೆ. ವೆಬ್ಸೈಟ್ನ ನಿರ್ಬಂಧ ತೆರವುಗೊಳಿಸುವಂತೆ ವಿಕಿಪೀಡಿಯಾ ಆಗ್ರಹಿಸಿದೆ.

Similar News