ಡಿಸೆಂಬರ್ ಒಳಗಾಗಿ 'ಸ್ಲೀಪರ್' ವಂದೇ ಭಾರತ್ ಸೇವೆಗೆ: ರೈಲ್ವೆ ಸಚಿವ

Update: 2023-02-05 02:07 GMT

ಹೊಸದಿಲ್ಲಿ: ದೇಶದಲ್ಲಿ ಸ್ಲೀಪರ್ ಬರ್ತ್ ಸೌಲಭ್ಯ ಹೊಂದಿದ ಮೊಟ್ಟಮೊದಲ ವಂದೇ ಭಾರತ್ ರೈಲು ಡಿಸೆಂಬರ್ ವೇಳೆಗೆ ಸೇವೆಗೆ ಸಜ್ಜಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಅಂತೆಯೇ ಒಂದು ವರ್ಷದ ಒಳಗಾಗಿ ಮೊಟ್ಟಮೊದಲ ವಂದೇ ಮೆಟ್ರೊ ಮಾದರಿ ಸಿದ್ಧವಾಗಲಿದೆ ಎಂದು ಪ್ರಕಟಿಸಿದ್ದಾರೆ.

2026ರ ಜುಲೈ- ಆಗಸ್ಟ್ ವೇಳೆಗೆ ಮೊಟ್ಟಮೊದಲ ಬುಲೆಟ್ ರೈಲು ಸಂಚಾರ ಆರಂಭಿಸುವ ನಿರೀಕ್ಷೆ ಇದೆ. ಅಹ್ಮದಾಬಾದ್- ಮುಂಬೈ ಬುಲೆಟ್ ರೈಲು ಯೋಜನೆ ಪ್ರಗತಿ ವೇಗ ಪಡೆದಿದ್ದು, ಈ ವರ್ಷ ರೋಲಿಂಗ್ ಸ್ಟಾಕ್ (ರೈಲು) ಖರೀದಿಗೆ ಟೆಂಡರ್ ಕರೆಯಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ವಂದೇ ಭಾರತ್ ರೈಲನ್ನು 500-600 ಕಿಲೋಮಿಟರ್ ಅಂತರದ ಪ್ರಯಾಣಕ್ಕಾಗಿ ಪ್ರಸ್ತುತ ಓಡಿಸಲಾಗುತ್ತಿದೆ. ಅಂತೆಯೇ ವಂದೇ ಮೆಟ್ರೊ ಶಟ್ಲ್ ಎರಡು ನಗರಗಳ ನಡುವಿನ 100 ಕಿಲೋಮೀಟರ್ ಒಳಗಿನ ಅಂತರದ ಸೇವೆಗೆ ಸಜ್ಜಾಗಲಿದೆ ಎಂದು ವಿವರಿಸಿದ್ದಾರೆ.

ಬುಲೆಟ್ ರೈಲು ಯೋಜನೆ ಪ್ರಗತಿ ಬಗ್ಗೆ ಖಾಸಗಿ ಟಿವಿ ಚಾನಲ್ ಒಂದಕ್ಕೆ ವಿವರ ನಿಡಿರುವ ಅವರು, ಇದುವರೆಗೆ 140 ಕಿಲೋಮಿಟರ್ ರೈಲು ಬಳಿ ಅಭಿವೃದ್ಧಿಪಡಿಸಲಾಗಿದೆ. ಎಂಟು ನದಿಗಳಿಗೆ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಮಹಾರಾಷ್ಟ್ರದಲ್ಲಿ 13 ರೈಲು ನಿಲ್ದಾಣಗಳು ಬಹುತೇಕ ಪೂರ್ಣಗೊಂಡಿವೆ. ಈ ರೈಲು ಗಂಟೆಗೆ 320 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ ಎಂದು ಹೇಳಿದ್ದಾರೆ.

Similar News