ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಝ್ ಮುಷರಫ್ ನಿಧನ

Update: 2023-02-05 10:42 GMT

ದುಬೈ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ (ನಿವೃತ್ತ) ಪರ್ವೇಝ್ ಮುಷರಫ್ ದುಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಮುಷರಫ್ ಅವರು ಅನಾರೋಗ್ಯದ ಕಾರಣ ದುಬೈನ ಅಮೆರಿಕನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.

ಆಗಸ್ಟ್ 11, 1943ರಂದು ದೆಹಲಿಯಲ್ಲಿ ಜನಿಸಿದ್ದ ಪರ್ವೇಝ್ ಮುಷರಫ್, ತಮ್ಮ ಆರಂಭಿಕ ವಿದ್ಯಾಭ್ಯಾಸವನ್ನು ಕರಾಚಿಯ ಸೇಂಟ್ ಪ್ಯಾಟ್ರಿಕ್ ಪ್ರೌಢಶಾಲೆಯಲ್ಲಿ ಪೂರೈಸಿದ್ದರು. ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ ಅವರು ಲಾಹೋರ್‌ನ ಫಾರ್ಮನ್ ಕ್ರಿಶ್ಚಿಯನ್ ಕಾಲೇಜಿಗೆ ಸೇರ್ಪಡೆಯಾಗಿದ್ದರು.

2007ರಲ್ಲಿ ಪಾಕಿಸ್ತಾನದ ಸಂವಿಧಾನವನ್ನು ಅಮಾನತುಗೊಳಿಸಿದ್ದರಿಂದ ದೇಶದ್ರೋಹದ ಆರೋಪಕ್ಕೆ ಗುರಿಯಾಗಿದ್ದ ಪರ್ವೇಝ್ ಮುಷರಫ್, 2016ರಿಂದ ದುಬೈನಲ್ಲಿ ನೆಲೆಸಿದ್ದರು.

2016ರಲ್ಲಿ ಚಿಕಿತ್ಸೆಗೆಂದು ದುಬೈಗೆ ತೆರಳಿದ್ದ ಈ ಮಾಜಿ ಸೇನಾಡಳಿತಾಧಿಕಾರಿ, ಅಂದಿನಿಂದ ಪಾಕಿಸ್ತಾನಕ್ಕೆ ಮತ್ತೆ ಮರಳಲೇ ಇಲ್ಲ.

ಈ ಕುರಿತು ಟ್ವೀಟ್ ಮಾಡಿರುವ ಮುಷರಫ್ ಕುಟುಂಬದ ಸದಸ್ಯರು, ವೈದ್ಯಕೀಯ ಚಿಕಿತ್ಸೆಯ ಸಂದರ್ಭದಲ್ಲಿ ತಲೆದೋರಿದ ಸಂಕೀರ್ಣತೆಯಿಂದ ಮುಷರಫ್ ಅಮೈಲೊಯ್ಡೊಸಿಸ್ ಎಂಬ ರೋಗಕ್ಕೆ ತುತ್ತಾಗಿದ್ದರು ಎಂದು ತಿಳಿಸಿದ್ದಾರೆ. ಅಮೈಲೊಯ್ಡೊಸಿಸ್ ವಿರಳ ರೋಗವಾಗಿದ್ದು, ಕೆಲವು ಬಗೆಯ ಪ್ರೋಟೀನ್‌ಗಳು ದೇಹದ ಹಲವಾರು ಭಾಗಗಳ ಜೀವಕೋಶಗಳ ಮೇಲೆ ಅಸಜವಾಗಿ ಶೇಖರಗೊಂಡು, ಅಂಗಾಂಗ ಹಾನಿಗೆ ಕಾರಣವಾಗುತ್ತದೆ.

2019ರಲ್ಲಿ ವಿಶೇಷ ನ್ಯಾಯಾಲಯವು ಪರ್ವೇಝ್ ಮುಷರಫ್ ಅವರಿಗೆ ಮರಣ ದಂಡನೆ ವಿಧಿಸಿತ್ತು. ಮುಷರಫ್ ಅವರು 1999ರಲ್ಲಿ ರಕ್ತರಹಿತ ಕ್ಷಿಪ್ರ ಕ್ರಾಂತಿಯ ಮೂಲಕ ಅಂದಿನ ಪ್ರಧಾನಿಯಾಗಿದ್ದ ನವಾಝ್ ಶರೀಫ್ ಅವರನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದಿದ್ದರು. 2008ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ನಂತರ ಹಕ್ಕುಚ್ಯುತಿ ಆರೋಪಕ್ಕೆ ಗುರಿಯಾಗಿದ್ದರು. ನಂತರ ಸಾರ್ವತ್ರಿಕ ಒತ್ತಡದ ಕಾರಣಕ್ಕೆ ಅಧ್ಯಕ್ಷ ಪದವಿಯಿಂದ ಕೆಳಗಿಳಿದಿದ್ದ ಮುಷರಫ್, ಸ್ವಯಂ ನಿರ್ಣಯದ ಮೇಲೆ ದುಬೈಗೆ ಪಲಾಯನಗೈದಿದ್ದರು.

Similar News