ಒಪ್ಪಂದ ಸಂಸ್ಥೆಗಳಿಗೆ ಮಾನವ ಹಕ್ಕು ಸಂಬಂಧಿತ ಬಾಧ್ಯತೆಗಳ ಮೇಲ್ವಿಚಾರಣೆಗೆ ಸಮಿತಿ ರಚನೆ

Update: 2023-02-05 11:05 GMT

ಹೊಸದಿಲ್ಲಿ,ಫೆ.5: ಒಪ್ಪಂದ ಸಂಸ್ಥೆಗಳಿಗೆ ಮಾನವ ಹಕ್ಕುಗಳ ಸಂಬಂಧಿತ ಬಾಧ್ಯತೆಗಳು ಮತ್ತು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯು ಮಾಡಿರುವ ಸಾರ್ವತ್ರಿಕ ನಿಯತಕಾಲಿಕ ಪರಾಮರ್ಶೆ (UPR)ಯ ಮೇಲ್ವಿಚಾರಣೆಗಾಗಿ ರಚನಾತ್ಮಕ ಕಾರ್ಯವಿಧಾನವೊಂದನ್ನು ರೂಪಿಸಲು ಸಮಿತಿಯೊಂದನ್ನು ಕೇಂದ್ರ ಸರಕಾರವು ರಚಿಸಿದೆ. ಸರಕಾರದಿಂದ ಪ್ರಮುಖ ಅಂತರರಾಷ್ಟ್ರೀಯ ಮಾನವ ಹಕ್ಕು ಒಪ್ಪಂದಗಳ ಅನುಷ್ಠಾನದ ಮೇಲೆ ನಿಗಾಯಿರಿಸುವ ತಜ್ಞರ ಗುಂಪನ್ನು ಒಪ್ಪಂದ ಸಂಸ್ಥೆಗಳು ಎಂದು ಕರೆಯಲಾಗುತ್ತದೆ.

ಸಮಿತಿಯು ಮಾನವ ಹಕ್ಕುಗಳ ವಿಷಯಗಳಿಗಾಗಿ ರಾಷ್ಟ್ರೀಯ ಕಾರ್ಯವಿಧಾನವಾಗಿ ಕಾರ್ಯ ನಿರ್ವಹಿಸಲಿದೆ ಮತ್ತು ವರ್ಷಕ್ಕೆ ಎರಡು ಬಾರಿ ಸಭೆ ಸೇರುತ್ತದೆ. ಗೃಹ ಮತ್ತು ವಿದೇಶಾಂಗ ಸಚಿವಾಲಯಗಳ ಜಂಟಿ ಉಸ್ತುವಾರಿಯಡಿ ಸಮಿತಿಯನ್ನು ರಚಿಸಲಾಗಿದೆ.ಭಾರತದ ಮಾನವ ಹಕ್ಕುಗಳ ದಾಖಲೆಯ ಇತ್ತೀಚಿನ ಯುಪಿಆರ್ ಅನ್ನು ಕಳೆದ ವರ್ಷದ ನ.10ರಂದು ನಡೆಸಲಾಗಿತ್ತು.

THE WIREಸುದ್ದಿ ಜಾಲತಾಣ ನ ವರದಿಯಂತೆ ಭಾರತವು ಸುಮಾರು 340 ಶಿಫಾರಸುಗಳನ್ನು ಸ್ವೀಕರಿಸಿದೆಯಾದರೂ,ಈ ಪೈಕಿ ಎಷ್ಟನ್ನು ಅನುಷ್ಠಾನಗೊಳಿಸಲಾಗುವುದು ಎನ್ನುವುದನ್ನು ಕೇಂದ್ರದ ಅಧಿಕಾರಿಗಳು ಇನ್ನಷ್ಟೇ ನಿರ್ಧರಿಸಬೇಕಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಮತ್ತು ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ ಅಂತರ್ಸಚಿವಾಲಯ ಸಮಿತಿಯ ಸಹ-ಅಧ್ಯಕ್ಷರಾಗಿರುತ್ತಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ,ಅಲ್ಪಸಂಖ್ಯಾತರ ವ್ಯವಹಾರಗಳು,ಬುಡಕಟ್ಟು ವ್ಯವಹಾರಗಳು,ಗ್ರಾಮೀಣಾಭಿವೃದ್ಧಿ,ವಸತಿ ಮತ್ತು ನಗರ ವ್ಯವಹಾರಗಳು,ಆರೋಗ್ಯ ಮತ್ತು ಕುಟುಂಬ ಕಲ್ಯಾಣ,ಕಾರ್ಮಿಕ ಮತ್ತು ಉದ್ಯೋಗ,ಶಾಲಾ ಶಿಕ್ಷಣ ಮತ್ತು ಸಾಕ್ಷರತೆ,ಕಾನೂನು ವ್ಯವಹಾರಗಳು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಗಳ ಹಾಗೂ ನೀತಿ ಆಯೋಗದ ಜಂಟಿ ಕಾರ್ಯದರ್ಶಿಗಳು ಸಮಿತಿಯ ಸದಸ್ಯರಾಗಿರುತ್ತಾರೆ. ಸರಕಾರವು ಶುಕ್ರವಾರ ಸಮಿತಿ ರಚನೆಯ ಅಧಿಸೂಚನೆಯನ್ನು ಹೊರಡಿಸಿದೆ.

ಅಂತರರಾಷ್ಟ್ರೀಯ ಒಪ್ಪಂದಗಳಿಗೆ ತನ್ನ ಬಾಧ್ಯತೆಗಳನ್ನು ಜಾರಿಗೊಳಿಸಲು ಸರಕಾರವು ಸಮಿತಿಯೊಂದನ್ನು ರಚಿಸಿರುವುದು ಸ್ವಾಗತಾರ್ಹವಾಗಿದೆ. ಇದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ,ರಾಷ್ಟ್ರೀಯ ಮಹಿಳಾ ಆಯೋಗ,ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಇತರ ಸಾಂವಿಧಾನಿಕ ಸಂಸ್ಥೆಗಳ ಸ್ವಾತಂತ್ರವನ್ನು ಹೆಚ್ಚಿಸುವುದನ್ನು ಮತ್ತು ಸರಕಾರದ ಟೀಕಾಕಾರರು ಸೇರಿದಂತೆ ನಾಗರಿಕ ಸಮಾಜದೊಂದಿಗೆ ಸದೃಢ ತೊಡಗುವಿಕೆಯನ್ನು ಒಳಗೊಂಡಿರುತ್ತದೆ ಎಂದು ಆಶಿಸಲಾಗಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ನ ದಕ್ಷಿಣ ಏಶ್ಯಾ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಹೇಳಿದರು.

ನ್ಯಾಯಾಂಗೇತರ ದಂಡನೆಯ ಕ್ರಮವಾಗಿ ವಿವಿಧ ರಾಜ್ಯ ಸರಕಾರಗಳು ಭಾರತೀಯ ಮುಸ್ಲಿಮರು ಮತ್ತು ಕಡಿಮೆ ಆದಾಯ ಗುಂಪುಗಳಿಗೆ ಸೇರಿದ ಮನೆಗಳನ್ನು ನೆಲಸಮಗೊಳಿಸಲು ಕಾರ್ಯಾಚರಣೆಗಳನ್ನು ನಡೆಸುತ್ತಿದ್ದನ್ನು ಪ್ರಮುಖವಾಗಿ ಬಿಂಬಿಸಿ ಹ್ಯೂಮನ್ ರೈಟ್ಸ್ ವಾಚ್ ವರದಿಯನ್ನು ಬಿಡುಗಡೆಗೊಳಿಸಿದ ಕೆಲವೇ ದಿನಗಳಲ್ಲಿ ಸಮಿತಿ ರಚನೆಯನ್ನು ಪ್ರಕಟಿಸಲಾಗಿದೆ.

Similar News