ಕೇಂದ್ರ ಸರಕಾರ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸುವ ಸಾಧ್ಯತೆ

Update: 2023-02-05 15:21 GMT

ಹೊಸದಿಲ್ಲಿ,ಫೆ.5: ಒಪ್ಪಿತ ಸೂತ್ರಕ್ಕನುಗುಣವಾಗಿ ಕೇಂದ್ರ ಸರಕಾರವು ತನ್ನ ಒಂದು ಕೋಟಿಗೂ ಹೆಚ್ಚಿನ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಈಗಿನ ಶೇ.38ರಿಂದ ಶೇ.42ಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ.

ಕಾರ್ಮಿಕ ಸಚಿವಾಲಯದ ಘಟಕವಾಗಿರುವ ಲೇಬರ್ ಬ್ಯೂರೊ ಕೈಗಾರಿಕಾ ಕಾರ್ಮಿಕರಿಗಾಗಿ ಗ್ರಾಹಕ ಬೆಲೆ ಸೂಚ್ಯಂಕ ವನ್ನು ಪ್ರತಿ ತಿಂಗಳು ಬಿಡುಗಡೆಗೊಳಿಸುತ್ತದೆ. ಇತ್ತೀಚಿನ ಸೂಚ್ಯಂಕದ ಆಧಾರದಲ್ಲಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ನಿರ್ಧರಿಸಲಾಗುತ್ತದೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಆಲ್ ಇಂಡಿಯಾ ರೈಲ್ವೆಮೆನ್ ಫೆಡೆರೇಷನ್ ನ ಪ್ರಧಾನ ಕಾರ್ಯದರ್ಶಿ ಶಿವಗೋಪಾಲ ಮಿಶ್ರಾ ಅವರು,2022 ಡಿಸೆಂಬರ್ ನ ಸಿಪಿಐ-ಐಡಬ್ಲು 2023,ಜ.1ರಂದು ಬಿಡುಗಡೆಗೊಂಡಿದೆ. ಅದರಂತೆ ತುಟ್ಟಿಭತ್ಯೆಯನ್ನು ಶೇ.4.3ರಷ್ಟು ಹೆಚ್ಚಿಸಬೇಕಾಗುತ್ತದೆ. ಆದರೆ ತುಟ್ಟಿಭತ್ಯೆಯನ್ನು ಹೆಚ್ಚಿಸುವಾಗ ಸರಕಾರವು ಪೂರ್ಣಾಂಕವನ್ನು ಮಾತ್ರ ಪರಿಗಣಿಸುತ್ತದೆ. ಹೀಗಾಗಿ ತುಟ್ಟಿಭತ್ಯೆ ನಾಲ್ಕು ಶೇಕಡಾವಾರು ಅಂಕಗಳೊಂದಿಗೆ ಶೇ.42ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ತುಟ್ಟಿಭತ್ಯೆ ಏರಿಕೆಯ ಪ್ರಸ್ತಾವವನ್ನು ಸಿದ್ಧಪಡಿಸಿ ಅದನ್ನು ಅನುಮೋದನೆಗಾಗಿ ಕೇಂದ್ರ ಸಂಪುಟಕ್ಕೆ ಸಲ್ಲಿಸುತ್ತದೆ ಎಂದರು. ತುಟ್ಟಿಭತ್ಯೆ ಏರಿಕೆಯು 2023,ಜ.1ರಿಂದ ಅನ್ವಯಗೊಳ್ಳಲಿದೆ.

ಪ್ರಸ್ತುತ ಒಂದು ಕೋಟಿಗೂ ಅಧಿಕ ಕೇಂದ್ರ ಸರಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರು ಶೇ.38ರಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ.

ಈ ಹಿಂದೆ 2022,ಸೆ.28ರಂದು ತುಟ್ಟಿಭತ್ಯೆಯನ್ನು ಪರಿಷ್ಕರಿಸಲಾಗಿದ್ದು,2022,ಜು.1ರಿಂದ ಜಾರಿಗೊಂಡಿತ್ತು.

ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ.

Similar News