ಮಧ್ಯಪ್ರದೇಶ: ಕಾದ ಸರಳಿನಿಂದ ಬರೆ: ಇಬ್ಬರು ಶಿಶುಗಳು ಸಾವು

Update: 2023-02-05 17:14 GMT

ಭೋಪಾಲ್, ಫೆ. 5: ಮಧ್ಯಪ್ರದೇಶದ ಶಹಡೋಲ್ ಜಿಲ್ಲೆಯಲ್ಲಿ ಕಾಯಿಲೆಗಳನ್ನು ಗುಣಪಡಿಸುವ ಚಿಕಿತ್ಸೆಯ ಭಾಗವಾಗಿ ಕಾದ ಸರಳಿನಿಂದ ಬರೆ ಎಳೆದ ಪರಿಣಾಮ ಕಳೆದ ನಾಲ್ಕು ದಿನಗಳಲ್ಲಿ ಎರಡು ಶಿಶುಗಳು ಸಾವನ್ನಪ್ಪಿವೆ. ಮೊದಲ ಸಾವು ಬುಧವಾರ ವರದಿಯಾಗಿದೆ. ‘‘ನಾನು ಅನಾರೋಗ್ಯದ ಹಿನ್ನೆಲೆಯಲ್ಲಿ ಶಿಶುವನ್ನು ಮಹಿಳೆಯೊಬ್ಬರಲ್ಲಿಗೆ ಕರೆದುಕೊಂಡು ಹೋಗಿದ್ದೆ.

ಅವರು ಕಾದ ಸರಳಿನಿಂದ 50ಕ್ಕೂ ಅಧಿಕ ಬಾರಿ ಬರೆ ಎಳೆದು ಚಿಕಿತ್ಸೆ ನೀಡಿದ್ದರು’’ ಎಂದು ಶಿನ್ಹಪುರದ ಕಥೋಟಿಯಾ ಗ್ರಾಮದ ನಿವಾಸಿಯಾಗಿರುವ ಶಿಶುವಿನ ತಾಯಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇದೇ ರೀತಿ ಕಾದ ಕಬ್ಬಿಣದ ಸಲಾಕೆಯಿಂದ ಬರೆ ಎಳೆದು ಚಿಕಿತ್ಸೆ ನೀಡಿದ ಪರಿಣಾಮ ನಿನ್ನೆ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಮೂರು ತಿಂಗಳ ಇನ್ನೊಂದು ಶಿಶು ಮೃತಪಟ್ಟಿದೆ ಎಂದು ಮುಖ್ಯ ವೈದ್ಯಕೀಯ ಹಾಗೂ ಆರೋಗ್ಯಾಧಿಕಾರಿ ಆರ್.ಕೆ. ಪಾಂಡೆ ಅವರು ತಿಳಿಸಿದ್ದಾರೆ.

ಚಿಕಿತ್ಸೆ ನೀಡಿದ 40 ವರ್ಷದ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯನ್ನು ಇನ್ನಷ್ಟೇ ಬಂಧಿಸಬೇಕಾಗಿದೆ ಎಂದು ಶಿನ್ಹಪುರ ಪೊಲೀಸ್ ಠಾಣೆಯ ಪ್ರಭಾರಿ ಎಂ.ವಿ ಅಹಿರ್ವಾರ್ ಅವರು ತಿಳಿಸಿದ್ದಾರೆ.

Similar News