ಕ್ವೆಟ್ಟಾ: ಪೊಲೀಸ್ ವಸತಿ ಪ್ರದೇಶದಲ್ಲಿ ಸ್ಪೋಟ; ಐವರಿಗೆ ಗಾಯ

Update: 2023-02-05 17:48 GMT

ಕ್ವೆಟ್ಟಾ,ಫೆ.5: ಪಾಕಿಸ್ತಾನದ ಕ್ವೆಟ್ಟಾ ಪೊಲೀಸ್ ವಸತಿ ಪ್ರದೇಶದಲ್ಲಿ ರವಿವಾರ ನಡೆದ ಸ್ಫೋಟದಲ್ಲಿ ಕನಿಷ್ಠ ಐವರು ಗಾಯಗೊಂಡಿದ್ದಾರೆ ಎಂದು ಡಾನ್ ಆನ್‌ಲೈನ್ ಸುದ್ದಿಜಾಲತಾಣ ವರದಿ ಮಾಡಿದೆ. ಗಾಯಾಳುಗಳನ್ನು ನಗರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಸ್ಫೋಟ ನಡೆದ ಸ್ಥಳದಲ್ಲಿ ಸಂತ್ರಸ್ತರ ತೆರವು ಹಾಗೂ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಸಾಮಾಜಿಕ ಸೇವಾ ಸಂಘಟನೆ ‘ಎದಿ’ಯ ಕಾರ್ಯಕರ್ತ ಝೀಶಾನ್ ಅಹ್ಮದ್ ಅವರು ಹೇಳಿದ್ದಾರೆ. ಗಾಯಾಳುಗಳನ್ನು ಕ್ವೆಟ್ಟಾದಲ್ಲಿರುವ ನಾಗರಿಕ ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಅವರು ತಿಳಿಸಿದ್ದಾರೆ.

ಪೊಲೀಸರು ಹಾಗೂ ತುರ್ತುಪರಿಸ್ಥಿತಿ ನಿರ್ವಹಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಇಡೀ ಪ್ರದೇಶವನ್ನು ಭದ್ರತಾಪಡೆಗಳು ಸುತ್ತುವರಿದಿವೆಯೆಂದು ಅಹ್ಮದ್ ತಿಳಿಸಿದ್ದಾರೆ.
ಆದರೆ ಸ್ಫೋಟದ ಸ್ವರೂಪದ ಬಗ್ಗೆ ಪೊಲೀಸರು ಈ ತನಕ ಯಾವುದೇ ಹೇಳಿಕೆಯನ್ನು ನೀಡಿಲ್ಲವೆಂದು ಡಾನ್ ವರದಿ ಮಾಡಿದೆ. ತೀವ್ರವಾದಿ ಸಂಘಟನೆ ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್ ಈ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿದೆಯೆಂದು ವರದಿಗಳು ತಿಳಿಸಿವೆ.

Similar News