ವಹಾಬ್ ರಿಯಾಝ್ ಎಸೆದ ಅಂತಿಮ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿದ ಇಫ್ತಿಕಾರ್ ಅಹ್ಮದ್

Update: 2023-02-05 18:37 GMT

  ಕರಾಚಿ, ಫೆ.5: ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಕ್ವೆಟ್ಟಾದಲ್ಲಿ ರವಿವಾರ ಆಯೋಜಿಸಿದ್ದ ಪ್ರದರ್ಶನ ಪಂದ್ಯದಲ್ಲಿ ಬಲಗೈ ವೇಗಿ ವಹಾಬ್ ರಿಯಾಝ್ ಎಸೆದ ಅಂತಿಮ ಓವರ್‌ನಲ್ಲಿ ಸತತ ಆರು ಸಿಕ್ಸರ್‌ಗಳನ್ನು ಸಿಡಿಸಿದ ಪಾಕಿಸ್ತಾನದ ಬ್ಯಾಟರ್ ಇಫ್ತಿಕಾರ್ ಅಹ್ಮದ್ ವಿಶೇಷ ಕ್ಲಬ್‌ಗೆ ಸೇರಿಕೊಂಡರು.

ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ 36 ರನ್ ಬಿಟ್ಟುಕೊಟ್ಟ ರಿಯಾಝ್ ನಾಲ್ಕು ಓವರ್‌ಗಳಲ್ಲಿ 47 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು.

  50 ಎಸೆತಗಳನ್ನು ಎದುರಿಸಿದ ಇಫ್ತಿಕಾರ್ ಔಟಾಗದೆ 94 ರನ್ ಗಳಿಸಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡ ಬಾಬರ್ ಆಝಂ ನೇತೃತ್ವದ ಪೇಶಾವರ್ ಝಲ್ಮಿ ವಿರುದ್ಧ 5 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಲು ನೆರವಾದರು.

185 ರನ್ ಗುರಿಯನ್ನು ಬೆನ್ನಟ್ಟಿದ ಪೇಶಾವರ ತಂಡ 181 ರನ್ ಗಳಿಸಿ ಮೂರು ರನ್‌ಗಳ ಅಂತರದಲ್ಲಿ ಸೋಲನುಭವಿಸಿತು. ಪಂದ್ಯದಲ್ಲಿ ಬಾಬರ್ 23 ರನ್ ಗಳಿಸಿದ್ದರು.

 ಈ ಮೊದಲು ಒಂಭತ್ತು ಆಟಗಾರರು ಒಂದೇ ಓವರ್‌ನಲ್ಲಿ ಗರಿಷ್ಠ ಸಂಖ್ಯೆಯ ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಅವರುಗಳೆಂದರೆ - ಗ್ಯಾರಿ ಸೋಬರ್ಸ್, ರವಿ ಶಾಸ್ತ್ರಿ, ಹರ್ಷಲ್ ಗಿಬ್ಸ್ (ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲಿಗರು), ಯುವರಾಜ್ ಸಿಂಗ್, ರಾಸ್ ವೈಟ್ಲಿ, ಹಝರತುಲ್ಲಾ ಝಜೈ, ಲಿಯೋ ಕಾರ್ಟರ್, ಕೀರಾನ್ ಪೊಲಾರ್ಡ್ ಹಾಗೂ ತಿಸಾರಾ ಪೆರೆರಾ.

ಕ್ರೀಡಾಂಗಣದ ಸಮೀಪವೇ ಸ್ಪೋಟ, ಪಂದ್ಯ ಪುನರಾರಂಭ

ಕ್ರೀಡಾಂಗಣದ ಸಮೀಪದಲ್ಲೇ ಭಯೋತ್ಪಾದಕ ದಾಳಿ ನಡೆದ ಕಾರಣ ಪಂದ್ಯವನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಲಾಯಿತು. ಸ್ಫೋಟದಲ್ಲಿ ಐವರಿಗೆ ಗಾಯವಾಗಿದೆ.

ಬಾಬರ್ ಮತ್ತು ಶಾಹಿದ್ ಅಫ್ರಿದಿಯಂತಹ ಪ್ರಮುಖ ಆಟಗಾರರನ್ನು ಡ್ರೆಸ್ಸಿಂಗ್ ರೂಮ್‌ಗೆ ಸುರಕ್ಷಿತವಾಗಿ ಕರೆದೊಯ್ಯಲಾಯಿತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯು ಭದ್ರತಾ ಅಧಿಕಾರಿಗಳಿಂದ ಗ್ರೀನ್ ಸಿಗ್ನಲ್ ಪಡೆದ ನಂತರ ಆಟವನ್ನು ಪುನರಾರಂಭಿಸಲಾಯಿತು. ಸ್ಫೋಟ ಸಂಭವಿಸಿದ ತಕ್ಷಣ ಮುಂಜಾಗ್ರತಾ ಕ್ರಮವಾಗಿ, ಪಂದ್ಯವನ್ನು ನಿಲ್ಲಿಸಲಾಯಿತು ಮತ್ತು ಆಟಗಾರರನ್ನು ಸ್ವಲ್ಪ ಸಮಯದವರೆಗೆ ಡ್ರೆಸ್ಸಿಂಗ್ ಕೋಣೆಗೆ ಕರೆದೊಯ್ಯಲಾಯಿತು. ಗ್ರೀನ್ ಸಿಗ್ನಲ್ ಲಭಿಸಿದ ನಂತರ ಪಂದ್ಯವು ಪುನರಾರಂಭವಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Similar News