ದ್ವೇಷ ಭಾಷಣದ ಆರೋಪ ಹೊಂದಿರುವ ವಿಕ್ಟೋರಿಯಾ ಗೌರಿ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶೆಯಾಗಿ ನೇಮಕ

Update: 2023-02-06 14:10 GMT

ಚೆನ್ನೈ: ಬಾರ್ ಕೌನ್ಸಿಲ್‌ನ ವಕೀಲರ ಪ್ರತಿಭಟನೆಯ ನಡುವೆಯೂ ವಕೀಲೆ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್‌ನ (MHC) ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ. ವಿಕ್ಟೋರಿಯಾ ಗೌರಿ ಅವರ ಉನ್ನತೀಕರಣದ ವಿರುದ್ಧ ಬಾರ್‌ ಕೌನ್ಸಿಲ್‌ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾಗ್ಯೂ ಕೇಂದ್ರ ಕಾನೂನು(Central law) ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು(Kiren Rijiju) ಗೌರಿ ಅವರ ನೇಮಕಾತಿಯನ್ನು ಘೋಷಿಸಿದ್ದಾರೆ.

ವಿಕ್ಟೋರಿಯಾ ಗೌರಿ ತಮಿಳುನಾಡಿನ ನಾಗರ್‌ಕೋಯಿಲ್‌ನ ವಕೀಲರಾಗಿದ್ದು, ಜನವರಿ 17 ರಂದು ಕೊಲಿಜಿಯಂ ಮದ್ರಾಸ್‌ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಉನ್ನತೀಕರಣಕ್ಕೆ ಶಿಫಾರಸು ಮಾಡಿದ ಐದು ವಕೀಲರಲ್ಲಿ ಇವರೂ ಒಬ್ಬರಾಗಿದ್ದರು.

ಗೌರಿ ಅವರನ್ನು ಉನ್ನತೀಕರಿಸುವ ಶಿಫಾರಸಿನ ವಿರುದ್ಧ ಕಳವಳ ವ್ಯಕ್ತಪಡಿಸಿ  ಮದ್ರಾಸ್ ಹೈಕೋರ್ಟ್ ಬಾರ್ ಕೌನ್ಸಿಲ್‌ ತನ್ನ  ಇಪ್ಪತ್ತೊಂದು ವಕೀಲರ ಗುಂಪನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಸುಪ್ರೀಂ ಕೋರ್ಟ್ ಕೊಲಿಜಿಯಂ ಬಳಿ ಕಳುಹಿಸಿತ್ತು.

ಗೌರಿ ಅವರನ್ನು ಉನ್ನತೀಕರಿಸುವ ಶಿಫಾರಸು "ನ್ಯಾಯಾಂಗದ ಸ್ವಾತಂತ್ರ್ಯವನ್ನು ಹದಗೆಡಿಸುತ್ತದೆ" ಎಂದು ಹೇಳಿದ ಬಾರ್‌ ಕೌನ್ಸಿಲ್‌ ನಿಯೋಗವು, ಗೌರಿ ಅವರು ಎರಡು ಸಂದರ್ಶನದಲ್ಲಿ ಮುಸ್ಲಿಮರು ಹಾಗೂ ಕ್ರೈಸ್ತರ ವಿರುದ್ಧ ಮಾಡಿದ್ದ ಧ್ವೇಷಭಾಷಣವನ್ನೂ ಉಲ್ಲೇಖಿಸಿತ್ತು. 

"ಜಿಹಾದ್ ಅಥವಾ ಕ್ರಿಶ್ಚಿಯನ್ ಮಿಷನರಿ - ರಾಷ್ಟ್ರೀಯ ಭದ್ರತೆ ಮತ್ತು ಶಾಂತಿಗೆ ಯಾವುದು ಹೆಚ್ಚು ಅಪಾಯಕಾರಿ? - ವಿಕ್ಟೋರಿಯಾ ಗೌರಿ ಉತ್ತರಿಸುತ್ತಾರೆ" ಎಂಬ ಶೀರ್ಷಿಕೆಯ ಒಂದು ಸಂದರ್ಶನದಲ್ಲಿ ಗೌರಿ ಅವರು ಕ್ರಿಶ್ಚಿಯನ್ನರ ಮತ್ತು ಮುಸ್ಲಿಮರ ವಿರುದ್ಧ ಧ್ವೇಷ ಭಾಷಣವನ್ನು ಮಾಡಿದ್ದರು.

ಆ ಸಂದರ್ಶದಲ್ಲಿ ಗೌರಿ, “ವಿಶ್ವ ಮಟ್ಟದಲ್ಲಿ, ಅವರು ಕ್ರಿಶ್ಚಿಯನ್ ಗುಂಪುಗಳಿಗಿಂತ ಇಸ್ಲಾಮಿಕ್ ಗುಂಪು ಹೆಚ್ಚು ಅಪಾಯಕಾರಿ ಎಂದು ಪರಿಗಣಿಸುತ್ತಾರೆ. ಆದರೆ ಭಾರತಕ್ಕೆ ಸಂಬಂಧಿಸಿದಂತೆ, ಇಸ್ಲಾಮಿಕ್ ಗುಂಪುಗಳಿಗಿಂತ ಕ್ರಿಶ್ಚಿಯನ್ ಗುಂಪುಗಳು ಹೆಚ್ಚು ಅಪಾಯಕಾರಿ ಎಂದು ನಾನು ಹೇಳಲು ಬಯಸುತ್ತೇನೆ. ಮತಾಂತರ, ಅದರಲ್ಲೂ ಲವ್ ಜಿಹಾದ್ ಸಂದರ್ಭದಲ್ಲಿ ಇವೆರಡೂ ಅಷ್ಟೇ ಅಪಾಯಕಾರಿ. ಒಬ್ಬ ಹಿಂದೂ ಹುಡುಗಿ ಮುಸಲ್ಮಾನನನ್ನು ಮದುವೆಯಾಗುವುದರ ಬಗ್ಗೆ ನನಗೆ ಅಭ್ಯಂತರವಿಲ್ಲ. ಆದರೆ, ಹಿಂದೂ ಹುಡುಗಿ ಮುಸ್ಲಿಂ ಹುಡುಗನನ್ನು ಮದುವೆಯಾಗಿ ಆತನ ಹೆಂಡತಿಯಾಗದೆ ಸಿರಿಯನ್‌ ಭಯೋತ್ಪಾದಕರ ಶಿಬಿರದಲ್ಲಿ ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಕಂಡರೆ ಅದಕ್ಕೆ ನನ್ನ ಆಕ್ಷೇಪಣೆ ಇದೆ. ಹಾಗೂ ಅದನ್ನು ನಾನು ಲವ್ ಜಿಹಾದ್ ಎಂದು ವ್ಯಾಖ್ಯಾನಿಸುತ್ತೇನೆ." ಎಂದು ಗೌರಿ ಸಂದರ್ಶನದಲ್ಲಿ ಹೇಳಿದ್ದಾರೆ. 

ಮುಂದುವರೆದು,  "ಆಕ್ರಮಣಕಾರಿ ಕ್ರಿಶ್ಚಿಯನ್ ದೇವತಾಶಾಸ್ತ್ರಜ್ಞರ ಗುಂಪುಗಳು ಮಾಡುತ್ತಿರುವ ಮತಾಂತರಗಳಿಗೆ ಹೋಲಿಸಿದರೆ ಬಾಂಬ್ ದಾಳಿ ಕಡಿಮೆ ಅಪಾಯಕಾರಿ" ಎಂದು ಗೌರಿ ಹೇಳಿದ್ದರು. 

ಇಂತಹ ಹಿನ್ನೆಲೆ ಇರುವ ಓರ್ವರನ್ನು ಹೈಕೋರ್ಟ್‌ ನ್ಯಾಯಾಧೀಶರನ್ನಾಗಿಸುವುದರ ವಿರುದ್ಧ ರಾಜ್ಯಾದ್ಯಂತ ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದೇ ವೇಳೆ, ಮಧುರೈನ 54 ವಕೀಲರ ಗುಂಪೊಂದು ಗೌರಿಯನ್ನು ಬೆಂಬಲಿಸಿ ರಾಷ್ಟ್ರಪತಿಗಳಿಗೆ ಮತ್ತೊಂದು ಪತ್ರವನ್ನು ಕಳುಹಿಸಿದ್ದರು.

Similar News