ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಉಪಕಲಾತ್ಮಕ ನಿರ್ದೇಶಕರಾಗಿ ಡಾ.ಪ್ರದೀಪ ಶೆಟ್ಟಿ ಆಯ್ಕೆ

Update: 2023-02-06 14:24 GMT

ಕುಂದಾಪುರ: ಪ್ರತಿಷ್ಠಿತ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉಪಕಲಾತ್ಮಕ ನಿರ್ದೇಶಕ (ಡೆಪ್ಯುಟಿ ಆರ್ಟಿಸ್ಟಿಕ್ ಡೈರೆಕ್ಟರ್)ರನ್ನಾಗಿ ಡಾ.ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನೂರು ಇವರನ್ನು ಕರ್ನಾಟಕ ಸರಕಾರ ನೇಮಿಸಿ ಆದೇಶ ಹೊರಡಿಸಿದೆ.

ಪುಣೆಯ ಫಿಲಂ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್‌ನಲ್ಲಿ ಅಪ್ರಿಸಿಶಿಯೇಶನ್ (ಸಿನೆಮಾ ರಸಗ್ರಹಣ) ಮತ್ತು ಕೊಲ್ಕತ್ತಾದ ಸತ್ಯಜಿತ್ ರೇ ಫಿಲಂ ಇನ್ಸ್ಟಿಟ್ಯೂಟ್ ನಿಂದ ಶಬ್ದಗ್ರಹಣದಲ್ಲಿ ತರಬೇತಿ ಹೊಂದಿರುವ ಇವರು, ಅಹ್ಮದಾಬಾದಿನಲ್ಲಿ ರುವ ಕೇಂದ್ರ ಸರಕಾರದ ಎನ್.ಐ.ಡಿ. ಹಾಗೂ ಆರ್.ವಿ. ವಿಶ್ವವಿದ್ಯಾಲಯ, ಮಣಿಪಾಲ ವಿಶ್ವವಿದ್ಯಾಲಯ, ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಸಿನಿಮಾ ಅಧ್ಯಯನದಲ್ಲಿ ಸಂದರ್ಶಕ ಪ್ರಾಧ್ಯಾಪಕ ರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಕನ್ನಡ ಸಿನಿಮಾ ಅಧ್ಯಯನದಲ್ಲಿ ಪಿ.ಎಚ್.ಡಿ. ಮಾಡಿರುವ ಪ್ರದೀಪ್, ವಿಶ್ವ ಸಿನಿಮಾ, ಭಾರತೀಯ ಸಿನಿಮಾ ಮತ್ತು ಕನ್ನಡ ಸಿನಿಮಾ ಕುರಿತಂತೆ ಒಟ್ಟು ಆರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2016ರಲ್ಲಿ ರಾಷ್ಟ್ರಪತಿಗಳ ಬೆಳ್ಳಿ ಪದಕ ಪ್ರಶಸ್ತಿ ಪಡೆದ ಗುಲ್ವಾಡಿ ಟಾಕೀಸ್ ನಿರ್ಮಾಣದ ರಿಸರ್ವೇಶನ್ ಸಿನಿಮಾದ ಚಿತ್ರಕಥೆಯ ಲೇಖಕರೂ ಆಗಿದ್ದಾರೆ. 2018ರಲ್ಲಿ ಕೇಂದ್ರ ಸರಕಾರದ ಸಂಸ್ಥೆ ಐ.ಸಿ.ಎಚ್.ಆರ್ ಫೆಲೋ ಆಗಿ ಕೂಡಾ ಇವರು ಆಯ್ಕೆಯಾಗಿದ್ದರು.

ಕರ್ನಾಟಕ ಸರಕಾರದ ವಾರ್ತಾ ಇಲಾಖೆಗೊಳಪಡುವ ಕರ್ನಾಟಕ ಚಲನ ಚಿತ್ರ ಅಕಾಡೆಮಿಯು ಈ ಉತ್ಸವವನ್ನು ಮಾ.16ರಿಂದ 23ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

Similar News