​2022ರಲ್ಲಿ ವಿದೇಶಗಳಿಗೆ ತೆರಳಿದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.68ರಷ್ಟು ಏರಿಕೆ: ಕೇಂದ್ರ ಸರಕಾರ

Update: 2023-02-07 13:58 GMT

ಹೊಸದಿಲ್ಲಿ,ಫೆ.7: ಶಿಕ್ಷಣ ಸಚಿವಾಲಯವು ಸೋಮವಾರ ಸಂಸತ್ತಿನಲ್ಲಿ ನೀಡಿರುವ ಮಾಹಿತಿಯಂತೆ 2022ರಲ್ಲಿ 7,50,365 ಭಾರತೀಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಗಳಿಗೆ ತೆರಳಿದ್ದು,ಇದು ಕಳೆದ ಆರು ವರ್ಷಗಳಲ್ಲಿ ಗರಿಷ್ಠವಾಗಿದೆ.

ಸಹಾಯಕ ಶಿಕ್ಷಣ ಸಚಿವ ಸುಭಾಷ ಸರ್ಕಾರ್(Subhas Sarkar) ಅವರು ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವ ಕುರಿತು ಸಂಸದರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ಒದಗಿಸಿದ್ದಾರೆ.

2021ರಲ್ಲಿ 4,44,553 ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳಿದ್ದರು. ಇದಕ್ಕೆ ಹೋಲಿಸಿದರೆ 2022ರಲ್ಲಿ ವಿದೇಶಗಳಿಗೆ ತೆರಳಿದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.68ರಷ್ಟು ಏರಿಕೆಯಾಗಿದೆ. ಈ ಎಲ್ಲ ವರ್ಷಗಳಲ್ಲಿ ವಿದೇಶಗಳಿಗೆ ತೆರಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. 2017,2018 ಮತ್ತು 2019ರಲ್ಲಿ ಅನುಕ್ರಮವಾಗಿ 4,54,009, 5,17,998 ಮತ್ತು 5,86,337 ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳಿದ್ದರು. ಆದರೆ ಸಾಂಕ್ರಾಮಿಕದ ಸಂದರ್ಭದಲ್ಲಿ 2020ರಲ್ಲಿ ಈ ಸಂಖ್ಯೆ ಅರ್ಧದಷ್ಟು ಕುಸಿದಿದ್ದು,2,59,655 ವಿದ್ಯಾರ್ಥಿಗಳು ವಿದೇಶಗಳಿಗೆ ತೆರಳಿದ್ದರು ಎನ್ನುವುದನ್ನು ಸಚಿವಾಲಯವು ಒದಗಿಸಿರುವ ಅಂಕಿಅಂಶಗಳು ತೋರಿಸಿವೆ.

ಉನ್ನತ ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರಳುವ ವಿದ್ಯಾರ್ಥಿಗಳ ವರ್ಗವನ್ನು ಗುರುತಿಸಲು ಯಾವುದೇ ಮಾನದಂಡವಿಲ್ಲ ಎಂದು ಸ್ಪಷ್ಟಪಡಿಸಿದ ಸರ್ಕಾರ್,ಗೃಹ ವ್ಯವಹಾರಗಳ ಸಚಿವಾಲಯದ ವಲಸೆ ಘಟಕವು ಭಾರತೀಯರ ನಿರ್ಗಮನಗಳು ಮತ್ತು ಆಗಮನಗಳ ಮಾಹಿತಿಗಳನ್ನು ಕಾಯ್ದುಕೊಳ್ಳುತ್ತದೆ. ಉನ್ನತ ಶಿಕ್ಷಣಕ್ಕಗಾಗಿ ವಿದೇಶಗಳಿಗೆ ತೆರಳುವ ಭಾರತೀಯರ ಸಂಖ್ಯೆಯನ್ನು ಮುಖ್ಯವಾಗಿ ಅವರ ವೌಖಿಕ ಬಹಿರಂಗಪಡಿಸುವಿಕೆಗಳು ಅಥವಾ ಅವರ ವೀಸಾ ವಿಧವನ್ನು ಆಧರಿಸಿ ಕಲೆಹಾಕಲಾಗುತ್ತದೆ ಎಂದು ತಿಳಿಸಿದರು.

Similar News