ಮತ್ತೊಂದು ‘ವಿವಾದ’ದ ಕೇಂದ್ರಬಿಂದುವಾದ ರೋಹಿತ್ ಚಕ್ರತೀರ್ಥ

ಯಕ್ಷ ಸಮ್ಮೇಳನದಲ್ಲಿ ಗೋಷ್ಠಿಗಳ ಉದ್ಘಾಟನೆಗೆ ಭಾರೀ ವಿರೋಧ

Update: 2023-02-07 14:13 GMT

ಉಡುಪಿ: ಕಳೆದ ವರ್ಷ ಪಠ್ಯಪುಸ್ತಕಗಳ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷನಾಗಿ ನೇಮಕಗೊಂಡು ಭಾರೀ ವಿವಾದಕ್ಕೆ ಕಾರಣರಾದ ರೋಹಿತ್ ಚಕ್ರತೀರ್ಥ ಇದೀಗ ಮತ್ತೊಂದು ವಿವಾದದ ಕೇಂದ್ರಬಿಂದುವಾಗಿ ಕಾಣಿಸಿಕೊಂಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಇದೇ ಫೆ.11 ಮತ್ತು 12ರಂದು ರಾಜ್ಯದ ಪ್ರಥಮ ಸಮಗ್ರ ಯಕ್ಷಗಾನ ಸಮ್ಮೇಳನ, ಸಾಹಿತ್ಯ ಸಮ್ಮೇಳನ ಮಾದರಿಯಲ್ಲಿ ನಡೆಯಲಿದ್ದು, ಯಕ್ಷಗಾನದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರದ ರೋಹಿತ್ ಚಕ್ರತೀರ್ಥ ರಾಜ್ಯ ಸಮ್ಮೇಳನದ ವಿಚಾರಗೋಷ್ಠಿಗಳ ಉದ್ಘಾಟನೆಗೆ ಹಾಗೂ ದಿಕ್ಸೂಚಿ ಭಾಷಣಕ್ಕೆ ನಿಯುಕ್ತಿಗೊಂಡಿರುವುದೇ ಇದೀಗ ವಿವಾದಕ್ಕೆ ಕಾರಣವಾಗಿದೆ.

ರೋಹಿತ್ ಚಕ್ರತೀರ್ಥರನ್ನು ಸಮ್ಮೇಳನಕ್ಕೆ ಕರೆಸಿರುವುದಕ್ಕೆ ಪ್ರಗತಿಪರರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಯಕ್ಷಗಾನಕ್ಕೂ ರೋಹಿತ್ ಚಕ್ರತೀರ್ಥರಿಗೂ ಏನು ಸಂಬಂಧ? ಎಂದು ಪ್ರಶ್ನಿಸತೊಡಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಉದ್ದೇಶಪೂರ್ವಕ ಅಜೆಂಡದೊಂದಿಗೆ ರೋಹಿತ್ ಚಕ್ರತೀರ್ಥರನ್ನು ಕರೆಸಲಾಗಿದೆ. ಇದು ಯಕ್ಷಗಾನ ಸಮ್ಮೇಳನವಲ್ಲ ಬಿಜೆಪಿ ಸಮಾವೇಶ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಚಾರವಾದಿಗಳು, ಲೇಖಕರು, ಬುದ್ಧಿಜೀವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೋಹಿತ್ ಚಕ್ರತೀರ್ಥರ ತವರು ಗ್ರಾಮದಲ್ಲೇ ನಡೆಯುತ್ತಿರುವ ಸಮ್ಮೇಳನದಲ್ಲಿ ವಿವಿಧ ವಿಷಯಗಳ ಮೇಲೆ ಒಟ್ಟು ಆರು ಗೋಷ್ಠಿಗಳು ನಡೆಯಲಿವೆ. ಫೆ.11ರ ಅಪರಾಹ್ನ 2:00ಗಂಟೆಗೆ ಕೆರೆಮನೆ ಶಿವರಾಮ ಹೆಗಡೆ ವೇದಿಕೆಯಲ್ಲಿ ರೋಹಿತ್ ಚಕ್ರತೀರ್ಥ ಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ. ಸಮ್ಮೇಳನದಲ್ಲಿ  ರೋಹಿತ್ ಚಕ್ರತೀರ್ಥರಿಗೆ ಆಹ್ವಾನ ನೀಡುವುದನ್ನು ಶಾಸಕ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷ ರಘುಪತಿ ಭಟ್ ಸಮರ್ಥಿಸಿಕೊಂಡಿದ್ದಾರೆ.

ಆಯ್ಕೆಗೇನು ಮಾನದಂಡ?: ರೋಹಿತ್ ಚಕ್ರತೀರ್ಥರನ್ನು ಆಹ್ವಾನಿಸಿರುವುದನ್ನು ಉಡುಪಿಯ ರಂಗಕರ್ಮಿ ಹಾಗೂ ಲೇಖಕ ಉದ್ಯಾವರ ನಾಗೇಶ್ ಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ. ಯಾವ ಮಾನದಂಡದ ಆಧಾರದಲ್ಲಿ ಅವರನ್ನು ಆಹ್ವಾನಿಸಿದ್ದೀರಿ ಎಂದವರು ಪ್ರಶ್ನಿಸಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಕಲಾವಿದರಿಗೆ ಕೊರತೆ ಇದೆಯೇ? ಇಲ್ಲಿ ಹಿರಿಯ ಕಲಾವಿದರು, ವಿದ್ವಾಂಸರಿಲ್ಲವೇ?. ಕೊಳ್ಯೂರು (ರಾಮಚಂದ್ರರಾವ್), ಹಂದೆ (ಎಚ್.ಶ್ರೀಧರ ಹಂದೆ) ಮುಂತಾದವರನ್ನು ಕರೆಸಬಹುದಿತ್ತಲ್ಲ? ಯಕ್ಷಗಾನ ಕ್ಷೇತ್ರದ ಹಿರಿಯರನ್ನು ಬಿಟ್ಟು ರೋಹಿತ್ ಚಕ್ರತೀರ್ಥರಿಗೆ ಮಣೆ ಹಾಕುವ ಔಚಿತ್ಯ ಏನಿತ್ತು? ಎಂದವರು ಪ್ರಶ್ನಿಸಿದ್ದಾರೆ.

‘ಇದು ರಾಜಕೀಯ ಸಮ್ಮೇಳನವೋ? ಅಥವಾ ನಿಜವಾದ ಯಕ್ಷಗಾನ ಸಮ್ಮೇಳನವೋ?’. ಉಡುಪಿ ಬೀಚ್ ಉತ್ಸವ, ಪರಶುರಾಮ ಥೀಂ ಪಾರ್ಕ್ ಆಯ್ತು ಈಗ ಯಕ್ಷಗಾನ ಸಮ್ಮೇಳನ...ಬಿಜೆಪಿ ಪಕ್ಷ ಸಂಘಟಿಸುವ ಸಮಾವೇಶಗಳಿಗೂ ಈ ಸರಕಾರಿ ಕಾರ್ಯಕ್ರಮಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಬಿಜೆಪಿಯ ಪ್ರೊಪಗಾಂಡ ಇಟ್ಟುಕೊಂಡು ನಡೆಯುತ್ತಿರುವ ಕಾರ್ಯಕ್ರಮದಂತೆ ಇದು ಭಾಸವಾಗುತ್ತಿದೆ ಎಂದವರು ಕಿಡಿ ಕಾರಿದ್ದಾರೆ.

‘ಸಾಂಸ್ಕೃತಿಕ ಕ್ಷೇತ್ರಗಳನ್ನು ರಾಜಕೀಯಗೊಳಿಸಬೇಡಿ. ಭವಿಷ್ಯದಲ್ಲಿ ಸಾಂಸ್ಕೃತಿಕ ವ್ಯಕ್ತಿಗಳಿಗೆ ಈ ರಾಜಕೀಯ ಅರ್ಥವಾಗಬಹುದು. ಅರ್ಥ ಆಗುವಾಗ ಸಾಂಸ್ಕೃತಿಕ ರಂಗ ಗಬ್ಬೆದ್ದು ಹೋಗಿರುತ್ತೆ. ಪ್ರಜ್ಞಾವಂತ ನಾಗರಿಕರು ಇದನ್ನು ವಿರೋಧಿಸಬೇಕು. ರೋಹಿತ್ ಚಕ್ರತೀರ್ಥಗೆ ಮಾನ್ಯತೆಯನ್ನು ನೀಡಲು ಇಲ್ಲಿಗೆ ಆಹ್ವಾನಿಸಲಾಗಿದೆ ಎಂದ ನಾಗೇಶ್ ಕುಮಾರ್, ಉಡುಪಿ ಕ್ಷೇತ್ರದಿಂದ ರೋಹಿತ್‌ಗೆ ಎಂಎಲ್‌ಎಗೆ ಟಿಕೆಟ್ ನೀಡ್ತಾರೆ ಅನ್ನುವ ವದಂತಿ ಕೂಡ ಇದೆ. ಚಕ್ರತೀರ್ಥರನ್ನು ಸಮಾಧಾನ ಮಾಡಲು ಈ ವ್ಯವಸ್ಥೆ ಮಾಡಿರಬೇಕು’ ಎಂದವರು ಸಂಶಯ ವ್ಯಕ್ತಪಡಿಸಿದ್ದಾರೆ.

ಯಕ್ಷಗಾನ ಸಮ್ಮೇಳನ, ಯಕ್ಷಗಾನ ಸಮ್ಮೇಳನವಾಗಿಯೇ ಇರಲಿ. ಪ್ರೋಟೋಕಾಲ್ ಹೆಸರಲ್ಲಿ ಸಮ್ಮೇಳನವನ್ನು ರಾಜಕೀಯ ಗೊಳಿಸಬೇಡಿ... ಆಮಂತ್ರಣ ಪತ್ರಿಕೆ ನೋಡುವಾಗಲೇ ಅಸಹ್ಯ ಎನಿಸುತ್ತೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

 (ನಾಗೇಶ್ ಕುಮಾರ್ / ರಮೇಶ್ ಕಾಂಚನ್)

ರಮೇಶ್ ಕಾಂಚನ್ ವಿರೋಧ: ವಿಷಯದ ಕುರಿತು ಮಾತನಾಡಿದ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಇತಿಹಾಸವನ್ನು ತಿರುಚಿರುವ ರೋಹಿತ್ ಚಕ್ರತೀರ್ಥರನ್ನು ದಿಕ್ಸೂಚಿ ಭಾಷಣಕ್ಕೆ ಆಹ್ವಾನಿಸಿರುವುದು ಮತ್ತೊಂದು ಗೊಂದಲ ಸೃಷ್ಟಿಗೆ ಕಾರಣವಾಗಿದೆ. ಎರಡು ಜಿಲ್ಲೆಗಳಲ್ಲಿ ಬಹಳಷ್ಟು ಮಂದಿ ಹಿರಿಯ ಕಲಾವಿದ್ದಾರೆ. ಅವರನ್ನು ಕಡೆಗಣಿಸಿ ಯಾಕೆ ರೋಹಿತರನ್ನು ಆಯೆ ಮಾಡಲಾಗಿದೆ ಎಂಬುದು ಯಕ್ಷಪ್ರಶ್ನೆ ಎಂದರು.

ಶಾಸಕರ ಸಮರ್ಥನೆ: ರೋಹಿತ್ ಚಕ್ರತೀರ್ಥ ಸಮ್ಮೇಳನದ ದಿಕ್ಸೂಚಿ ಭಾಷಣ ಮಾಡುವುದಕ್ಕೆ  ಪ್ರಗತಿಪರರ ಆಕ್ಷೇಪಗಳನ್ನು ತಳ್ಳಿಹಾಕಿದ ಶಾಸಕ ರಘುಪತಿ ಭಟ್, ಚಕ್ರತೀರ್ಥರನ್ನು ಆಹ್ವಾನಿಸಿರುವ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿ ಬರುತ್ತಿದೆ ಎಂದರು. ಒಂದು ಒಳ್ಳೆ ಕೆಲಸ ಮಾಡುವಾಗ ಅಪಸ್ವರ ಇದ್ದೇ ಇರುತ್ತೆ. ರೋಹಿತ್ ಚಕ್ರತೀರ್ಥ ಯಕ್ಷಗಾನದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಅವರು ಉಡುಪಿಯವರೇ... ಅವರ ಮನೆ ಹತ್ತಿರವೇ ಸಮ್ಮೇಳನ ಆಗುತ್ತಿದೆ. ಉಡುಪಿಯವರು ಎಂಬ ಕಾರಣಕ್ಕೆ ಆಹ್ವಾನಿಸಿದ್ದೇವೆ ಎಂದರು.

ಎಲ್ಲಾ ಗೋಷ್ಠಿಗಳಲ್ಲಿ ಆಯಾ ಕ್ಷೇತ್ರದ ವಿದ್ವಾಂಸರು ಭಾಗವಹಿಸುತ್ತಾರೆ. ಕಿರಿಯರು ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಅನ್ನೋದೇ ಈ ಸಮ್ಮೇಳನದ ಉದ್ದೇಶ. ನಮ್ಮ ಹಿರಿಯರು ಯಕ್ಷಗಾನವನ್ನು ಚೆನ್ನಾಗಿ ನಡೆಸಿಕೊಂಡು ಬಂದಿದ್ದಾರೆ. ಯುವ ಸಮುದಾಯ ಯಕ್ಷಗಾನ ಮುಂದುವರಿಸಲಿ ಎಂದು ಯುವ ಸಮುದಾಯಕ್ಕೆ ಆದ್ಯತೆ ನೀಡಿದ್ದೇವೆ. ಈ ವಿಚಾರದಲ್ಲಿ ನಮ್ಮ ಅಜೆಂಡಾ ಏನು ಇಲ್ಲ...ರೋಹಿತ್ ಚಕ್ರತೀರ್ಥ ಒಬ್ಬ ಒಳ್ಳೆಯ ಲೇಖಕರು. ಯಕ್ಷಗಾನದ ಬಗ್ಗೆ ಅವರಿಗೆ ಬಹಳ ವಿಚಾರಗಳು ಗೊತ್ತಿವೆ ಎಂದರು.

Similar News