ಭೂಕಂಪದಿಂದ ಸುಮಾರು 23 ದಶಲಕ್ಷ ಜನರ ಮೇಲೆ ಪರಿಣಾಮ :ವಿಶ್ವ ಆರೋಗ್ಯ ಸಂಸ್ಥೆ ಅಂದಾಜು

Update: 2023-02-07 16:58 GMT

ಜಿನೆವಾ, ಫೆ.7: ಟರ್ಕಿ ಮತ್ತು ಸಿರಿಯಾವನ್ನು ಜರ್ಝರಿತಗೊಳಿಸಿರುವ ಭೂಕಂಪವು ಸುಮಾರು 23 ದಶಲಕ್ಷ ಜನರ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ಹೇಳಿದೆ.

ಭೂಕಂಪದಿಂದ ಅತ್ಯಧಿಕ ನಾಶ-ನಷ್ಟ ಸಂಭವಿಸಿರುವ ದಕ್ಷಿಣ ಟರ್ಕಿ ಮತ್ತು ಸಿರಿಯಾದಲ್ಲಿ ಮಾನವೀಯ ನೆರವಿನ ಅಗತ್ಯ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪರಿಹಾರ ವಿಭಾಗದ ಹಿರಿಯ ಅಧಿಕಾರಿ ಎಡೆಲ್ಹೈಡ್ ಮಾರ್ಷಂಗ್ ಹೇಳಿದ್ದಾರೆ. ಈ ಆಘಾತವನ್ನು ತಾಳಿಕೊಳ್ಳುವ, ತುರ್ತು ಪರಿಹಾರ ಕ್ರಮ ಕೈಗೊಳ್ಳುವ ಸಾಮರ್ಥ್ಯ ಟರ್ಕಿಯಲ್ಲಿದೆ. ಆದರೆ ಈಗಾಗಲೇ ಸುದೀರ್ಘ ಅಂತರ್ಯುದ್ಧದಿಂದ ಜರ್ಜರಿತಗೊಂಡಿರುವ ಸಿರಿಯಾಕ್ಕೆ ತಕ್ಷಣದ ನೆರವಿನ ಅಗತ್ಯ ಹೆಚ್ಚಿದೆ. ಸಂಘರ್ಷ ಮತ್ತು ವ್ಯಾಪಕ ಕಾಲರಾ ರೋಗದ ಹೊಡೆತಕ್ಕೆ ತತ್ತರಿಸಿರುವ ಸಿರಿಯಾದ ಗಡಿಪ್ರದೇಶಕ್ಕೆ ಈಗ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ ಎಂದವರು ಹೇಳಿದ್ದಾರೆ.

ಸಿರಿಯಾದ್ಯಂತ ಸುಮಾರು 12 ವರ್ಷಗಳ ಸುದೀರ್ಘ, ಸಂಕೀರ್ಣ ಬಿಕ್ಕಟ್ಟಿನ ನಂತರ ಅಗತ್ಯತೆಗಳು ಅತ್ಯಧಿಕವಾಗಿವೆ. ಆದರೆ ಮಾನವೀಯ ನೆರವಿನ ನಿಧಿಯು ಕುಸಿಯುತ್ತಲೇ ಇದೆ.ಎರಡೂ ದೇಶಗಳಲ್ಲಿ 1.4 ದಶಲಕ್ಷ ಮಕ್ಕಳು ಸೇರಿದಂತೆ ಸುಮಾರು 23 ದಶಲಕ್ಷ ಜನತೆಯ ಮೇಲೆ ಈ ಭೀಕರ ಭೂಕಂಪ ಪರಿಣಾಮ ಬೀರುವ ಸಾಧ್ಯತೆಯಿದೆ. ಭೂಕಂಪದ ಬಳಿಕದ ಪಶ್ಚಾತ್ ಕಂಪನಗಳು ಇನ್ನೂ ಮುಂದುವರಿದಿದ್ದು ಸಾವಿರಾರು ಕಟ್ಟಡಗಳು ನೆಲಸಮಗೊಂಡಿವೆ. ಭೂಕಂಪದಿಂದ ಸಂತ್ರಸ್ತವಾಗಿರುವ ಪ್ರದೇಶಗಳಿಗೆ ವೈದ್ಯಕೀಯ ನೆರವು, ದಿನಬಳಕೆಯ ವಸ್ತುಗಳು, ಆಹಾರ ವಸ್ತುಗಳ ಸಹಿತ ತುರ್ತು ನೆರವು ಒದಗಿಸುವುದರ ಜತೆಗೆ, ತುರ್ತು ವೈದ್ಯಕೀಯ ತಂಡದ ಜಾಲವನ್ನು ಸಕ್ರಿಯಗೊಳಿಸುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
 ಈಗ ಸಮಯದ ವಿರುದ್ಧದ ಓಟವಾಗಿದೆ. ನಮಗೆ ಸಮಯದ ಕೊರತೆಯಿದೆ. ಪ್ರತೀ ನಿಮಿಷ, ಗಂಟೆ ಹಾದುಹೋದಂತೆ ಸಂತ್ರಸ್ತರನ್ನು ಜೀವಂತವಾಗಿ ಹೊರತೆಗೆಯುವ ಸಾಧ್ಯತೆ ಕ್ಷೀಣಿಸುತ್ತಿದೆ. ಯಾವ ಪ್ರದೇಶದಲ್ಲಿ ಎಷ್ಟು ಪ್ರಮಾಣದ ಹಾನಿಯಾಗಿದೆ ಎಂಬ ಮಾಹಿತಿಯು ತುರ್ತು ನೆರವನ್ನು ಕೇಂದ್ರೀಕರಿಸಲು ಪೂರಕವಾಗಿದೆ. ಆದರೆ ಟರ್ಕಿ ಮತ್ತು ಸಿರಿಯಾದ ಕೆಲವು ಪ್ರದೇಶಗಳಲ್ಲಿನ ನಾಶ-ನಷ್ಟದ ಕುರಿತ ಸಮರ್ಪಕ ಮಾಹಿತಿ ಲಭಿಸುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕಿ ಟೆಡ್ರಾಸ್ ಅಧನಾಮ್ ಘೆಬ್ರಯೇಸಸ್ ಹೇಳಿದ್ದಾರೆ.

ಅವಶೇಷಗಳಡಿ ಜನಿಸಿದ ಮಗು ತಾಯಿ ಮೃತ್ಯು

ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಭೀಕರ ಭೂಕಂಪದಿಂದ ಕುಸಿದು ಬಿದ್ದ ಕಟ್ಟಡದ ಅವಶೇಷಗಳಡಿಯಲ್ಲಿ ನವಜಾತ ಶಿಶುವೊಂದು ಪವಾಡಸದೃಶ ಬದುಕುಳಿದಿದ್ದು ಅದನ್ನು ರಕ್ಷಿಸಲಾಗಿದೆ. ಆದರೆ ಮಗುವಿನ ತಾಯಿ ಮತ್ತು ತಂದೆ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಕಾರ್ಯಕರ್ತರು ಹೇಳಿದ್ದಾರೆ.

ಈಶಾನ್ಯ ಸಿರಿಯಾದ ಅಫ್ರೀನ್ ನಗರದ ಬಳಿಯ ಜೆಂಡೆರೆಸ್ ಎಂಬಲ್ಲಿ ನಡೆದ ವ್ಯಾಪಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಸಂದರ್ಭ ತುಂಬು ಗರ್ಭಿಣಿ ಕಟ್ಟಡದ ಅವಶೇಷಗಳಡಿ ಪತ್ತೆಯಾಗಿದ್ದಾರೆ. ಅವರನ್ನು ರಕ್ಷಿಸುವ ಪ್ರಯತ್ನ ವಿಫಲವಾದರೂ ಅದಾಗಲೇ ಆಕೆ ಜನ್ಮ ನೀಡಿದ್ದ ನವಜಾತ ಹೆಣ್ಣು ಮಗು ಆರೋಗ್ಯವಾಗಿದೆ ಎಂದು ವರದಿಯಾಗಿದೆ.

Similar News