ಉಡುಪಿ | ಬಾಲಕಿಗೆ ಲೈಂಗಿಕ ದೌರ್ಜನ್ಯ: ಮಲತಂದೆಗೆ ಜೀವಿತಾವಧಿ ಜೈಲುಶಿಕ್ಷೆ

Update: 2023-02-07 16:56 GMT

ಉಡುಪಿ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ದೈಹಿಕ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಮಲತಂದೆಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯವು ಜೀವಿತಾವಧಿ ಜೈಲುಶಿಕ್ಷೆ ವಿಧಿಸಿ ಮಂಗಳವಾರ ಆದೇಶಿಸಿದೆ.

ಗಣೇಶ್ ನಾಯ್ಕ್(49) ಶಿಕ್ಷೆಗೆ ಗುರಿಯಾಗಿರುವ ಆರೋಪಿ.  ನೊಂದ ಬಾಲಕಿಯ ತಾಯಿಗೆ ಗಣೇಶ್ ನಾಯ್ಕ್ ಜೊತೆ ಎರಡನೇ ಮದುವೆಯಾಗಿದ್ದು, ನಂತರ ಆರೋಪಿ ಮತ್ತು ನೊಂದ ಬಾಲಕಿ ಒಟ್ಟಾಗಿ ವಾಸ ಮಾಡಿಕೊಂಡಿದ್ದರು. ಬಾಲಕಿಯ ತಾಯಿ ಬೇರೆ ಊರಿಗೆ ಕೆಲಸಕ್ಕೆ ಹೋಗಿದ್ದ ಸಂದರ್ಭ 2021 ಅಕ್ಟೋಬರ್‌ರಲ್ಲಿ ಆರೋಪಿ ಜ್ಯೂಸ್‌ನಲ್ಲಿ ಮದ್ಯ ಬೆರೆಸಿ ಬಾಲಕಿಗೆ ಕುಡಿಸಿ ಬಲತ್ಕಾರವಾಗಿ ದೈಹಿಕ ದೌರ್ಜನ್ಯ ಎಸಗಿದ್ದನು. ತಾಯಿ ಮೂರು ತಿಂಗಳ ಬಳಿಕ ಮನೆಗೆ ಬಂದು ನೋಡಿದಾಗ ಬಾಲಕಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂತು. ಈ ಬಗ್ಗೆ ವಿಚಾರಿಸಿದಾಗ ಬಾಲಕಿ, ತನ್ನ ಸಾಕು ತಂದೆ ದೌರ್ಜನ್ಯ ಎಸಗಿರುವುದಾಗಿ ತಾಯಿಗೆ ತಿಳಿಸಿದ್ದಳು.

ಅದರಂತೆ ನೊಂದ ಬಾಲಕಿಯ ತಾಯಿ 2022ರ ಜ.22ರಂದು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಆಗಿನ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ಆರೋಪಿ ವಿರುದ್ಧ ನ್ಯಾಯಾ ಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಒಟ್ಟು 33 ಸಾಕ್ಷಿಗಳ ಪೈಕಿ 10 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ನೊಂದ ಬಾಲಕಿಯ ಸಾಕ್ಷಿ ಮತ್ತು ಸಾಂದರ್ಭಿಕ ಸಾಕ್ಷಿ ಮತ್ತು ಡಿಎನ್‌ಎ ವರದಿಯನ್ನು ಪರಿಗಣಿಸಿ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿದೆ.

ಅದರಂತೆ ಆರೋಪಿಗೆ ಜೀವಿತಾವಧಿ ಜೈಲು ಶಿಕ್ಷೆ ಮತ್ತು 10ಸಾವಿರ ರೂ. ದಂಡ ಮತ್ತು ತಪ್ಪಿದಲ್ಲಿ ಒಂದು ವರ್ಷ ಹೆಚ್ಚುವರಿ ಶಿಕ್ಷೆ ಮತ್ತು ಅಪ್ರಾಪ್ತ ಬಾಲಕಿಗೆ ದೌರ್ಜನ್ಯ ಎಸಗಿದಕ್ಕೆ ಕಲಂ 6ರ ಅಡಿಯಲ್ಲಿ 10ಸಾವಿರ ರೂ. ದಂಡ ವಿಧಿಸ ಲಾಗಿದೆ. ಒಟ್ಟು 20ಸಾವಿರ ರೂ. ದಂಡದಲ್ಲಿ 15ಸಾವಿರ ಬಾಲಕಿಗೆ ಮತ್ತು 5ಸಾವಿರ ರೂ. ಸರಕಾರಕ್ಕೆ ನೀಡುವಂತೆ ಮತ್ತು ನೊಂದ ಬಾಲಕಿಗೆ ಸರಕಾರದಿಂದ 3ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಾಸಿಕ್ಯೂಶನ್ ಪರವಾಗಿ ಉಡುಪಿ ಪೋಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿ ಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು.

Similar News