ಭಟ್ಕಳ: ಜನಾಕರ್ಷಣೆಯ ಕೇಂದ್ರವಾಗುತ್ತಿರುವ ಮಕ್ಕಳ ಪುಸ್ತಕ ಮೇಳ

ದಿನವೂ ನೂರಾರು ಮಕ್ಕಳು, ಪಾಲಕರು ಭೇಟಿ, ಸಾವಿರಾರು ಪುಸ್ತಕಗಳ ಮಾರಾಟ

Update: 2023-02-07 17:11 GMT

ಭಟ್ಕಳ: ‘ಇದಾರ- ಎ- ಅದಬೆ- ಅತ್ಫಾಲ್’ ಮಕ್ಕಳ ಸಾಹಿತ್ಯ ಸಂಸ್ಥೆಯು ಫೆ.3ರಿಂದ 9ರವರೆಗೆ ಭಟ್ಕಳದಲ್ಲಿ ಆಯೋಜಿಸಿರುವ ‘ಮಕ್ಕಳ ಪುಸ್ತಕ ಮೇಳ’ ಆಕರ್ಷಣೀಯ ಕೇಂದ್ರವಾಗಿದೆ. ಈ ಮೇಳದಲ್ಲಿ ಪುಸ್ತಕಗಳಲ್ಲದೆ, ವಿಜ್ಞಾನ ಮತ್ತು ಕಲಾ ಕಾರ್ನರ್, ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳೂ ಇದೆ.

200 ರೂ.ಗಳ ಪ್ರತೀ ಖರೀದಿಗೆ ಟೋಕನ್ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಪ್ರತೀದಿನ ಆಕಷರ್ಕ ಬಹುಮಾನಗಳನ್ನು ನೀಡಲಾಗುತ್ತಿದೆ. ಮೇಳದಲ್ಲಿ ಪ್ರತಿಭಾ ಪ್ರದರ್ಶನಗಳು, ನಾಟಕಗಳು ಮತ್ತು ವಿವಿಧ ಶಾಲೆ, ಮದರಸಾಗಳ ನಡುವೆ ಸಾಂಸ್ಕೃತಿಕ, ಸಾಹಿತ್ಯಿಕ, ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಹಬ್ಬವನ್ನು ನೋಡಲು ಪುಸ್ತಕ ಪ್ರೇಮಿಗಳ ದಂಡೆ ಸೇರುತ್ತಿದೆ. ಕನ್ನಡ, ಉರ್ದು, ಅರಬಿಕ್ ಮತು ಇಂಗ್ಲಿಷ್ ಪುಸ್ತಕ ಪ್ರಕಾಶಕರು ಭಟ್ಕಳದಲ್ಲಿ ಆಗಮಿಸಿದ್ದು ಸಾವಿರಾರು ಪುಸ್ತಕಗಳ ಭಂಡಾರವೇ ತೆರೆದುಕೊಂಡಿವೆ.

ಕಳೆದ ಹಲವು ವರ್ಷಗಳಿಂದ ಮಕ್ಕಳನ್ನು ಮೊಬೈಲ್ ನಿಂದ ದೂರವಿಡಲು ಅವರನ್ನು ಸಾಹಿತ್ಯದ ಕಡೆಗೆ ಒಲವು ಬೆಳೆಸುವಂತಾಗಲು ಆರಂಭಿಸಿದ  ಭಟ್ಕಳದ ‘ಇದಾರ-ಎ-ಅದಬೆ ಅತ್ಫಾಲ್’ ಸಂಸ್ಥೆಯಲ್ಲಿ ನೂರಾರು ಮಕ್ಕಳು ಸದಸ್ಯರಾಗಿದ್ದಾರೆ. ಶಾಲಾ ಸಮಯದ ನಂತರ ಇದರ ಸದಸ್ಯರು ಮೌಲಾನ ಅಬ್ದುಲ್ ಬಾರಿ ಹಾಗೂ ಫಿತ್ರತ್ ಗ್ರಂಥಾಲಯಗಳ ಕಡೆಗೆ ಮುಖ ಮಾಡುತ್ತಾರೆ. ಅಲ್ಲಿ ಮಕ್ಕಳ ಸಾಹಿತ್ಯ, ನೈತಿಕ  ಮೌಲ್ಯಗಳ ಪುಸ್ತಕಗಳನ್ನು ಓದುತ್ತಾರೆ. ಈ ಗ್ರಂಥಾಲಯದಲ್ಲಿ 200ಕ್ಕೂ ಹೆಚ್ಚು ಪುಸ್ತಕಗಳನ್ನು ಓದಿ ಮುಗಿಸಿದ ಮಕ್ಕಳ ಸಂಖ್ಯೆ 200 ದಾಟಿದೆ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥ ಹಾಗೂ ‘ಫೂಲ್’ ಮಕ್ಕಳ ಸಾಹಿತ್ಯ ಪಾಕ್ಷಿಕದ ಸಂಪಾದಕ ಅಬ್ದ್ದುಲ್ಲಾ ಘಾಝೀ.

‘ಇದಾರ-ಎ-ಅದಬೆ ಅತ್ಫಾಲ್’ ಮಕ್ಕಳ ಪುಸ್ತಕ ಪ್ರಕಾಶನ ಸಂಸ್ಥೆ ಸುಮಾರು ಏಳು ವರ್ಷಗಳ ಹಿಂದೆ ಒಂದು ಪುಟ್ಟ ಲೈಬ್ರರಿಯನ್ನು ಸ್ಥಾಪಿಸಿ ತಮ್ಮ ಫೂಲ್ ಮ್ಯಾಗಜಿನ್(ಮಕ್ಕಳ ಪಾಕ್ಷಿಕ) ಆರಂಭಿಸಿತು. ಅದರಲ್ಲಿ ಮಕ್ಕಳಿಗೆ ಇಷ್ಟವಾದ ಚಿತ್ರಗಳು, ಕಾರ್ಟೂನ್‌ಗಳನ್ನು ಮುದ್ರಿಸುತ್ತಾ ಮಕ್ಕಳನ್ನು ಆಕರ್ಷಣೆಗೊಳಗಾಗುವಂತೆ ಪ್ರಕಟಿಸಿ, ಉಚಿತವಾಗಿ ಪುಸ್ತಕಗಳನ್ನು ಓದಲು ನೀಡಿತು. ಮೊದಲು ಪುಸ್ತಕದೊಂದಿಗೆ ಆಸಕ್ತಿ ಮೂಡಿಸುವಂತೆ ಮಾಡಿತು. ಅಂದು ಆರಂಭವಾದ ಲೈಬ್ರರಿ ಎಂದು ಹಿಂತಿರುಗಿ ನೋಡಲೇ ಇಲ್ಲ.  ಪ್ರತಿ ದಿನ ಎನ್ನುವಂತೆ ಮಕ್ಕಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಇಂದು ರಾಷ್ಟ್ರದ ಹೆಸರಾಂತ ಪ್ರಕಾಶಕರ ಪುಸ್ತಕಗಳೂ ಸೇರಿ ಸುಮಾರು 3,500ಕ್ಕೂ ಅಧಿಕ ಪುಸ್ತಕಗಳು ಮಕ್ಕಳಿಗೆ ಉಚಿತವಾಗಿ ಓದಲು ಲಭ್ಯವಾಗುತ್ತಿದೆ.

Similar News