ಬಿಜೆಪಿ ಸಂಸದನಿಂದ ‘ಸತಿ’ಯ ವೈಭವೀಕರಣ: ಲೋಕಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ; ಕಲಾಪ ಮಂದೂಡಿಕೆ

Update: 2023-02-07 17:14 GMT

ಹೊಸದಿಲ್ಲಿ, ಫೆ.7: ‘ ಸತಿ’ ಪದ್ದತಿಯನ್ನು ಬಿಜೆಪಿ ಸಂಸದ ಚಂದ್ರ ಪ್ರಕಾಶ್ ಜೋಶಿ ವೈಭವೀಕರಿಸುತ್ತಿದ್ದಾರೆಂದು ಆರೋಪಿಸಿ ಪ್ರತಿಪಕ್ಷ ಸದಸ್ಯರು ಸದನದ ಕಲಾಪದ ವೇಳೆ ಗದ್ದಲವೆಬ್ಬಿಸಿದ್ದರಿಂದ ಲೋಕಸಭೆ(Lok Sabha)ಯನ್ನು ಮಂಗಳವಾರ ಸ್ವಲ್ಪ ಹೊತ್ತು ಮುಂದೂಡಲಾಯಿತು.

ರಾಜಸ್ತಾನದ ಮೇವಾರ ಪ್ರಾಂತದ ರಾಣಿ ಪದ್ಮಾವತಿಯನ್ನು ಉಲ್ಲೇಖಿಸುವಾಗ ಲೋಕಸಭಾ ಸದಸ್ಯ ಚಂದ್ರಪ್ರಕಾಶ್ ಜೋಶಿ(Chandraprakash Joshi) ಅವರು ಸತಿ ಪದ್ದತಿಯನ್ನು ವೈಭವೀಕರಿಸಿ ಹೇಳಿಕೆ ನೀಡಿದ್ದಾರೆಂದು ಕಾಂಗ್ರೆಸ್,ಆರ್‌ಜೆಡಿ, ಸಿಪಿಎಂ ಸೇರಿದಂತೆ ವಿವಿಧ ಪ್ರತಿಪಕ್ಷಗಳ ನಾಯಕರು ಆರೋಪಿಸಿದರು.

ರಾಷ್ಟ್ರಪತಿ ಭಾಷಣದ ವಂದನಾನಿರ್ಣಯದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ರಾಜಸ್ತಾನದ ಚಿತ್ತೋರ್‌ಗಢ ಸಂಸದರಾದ ಚಂದ್ರಪ್ರಕಾಶ್ ಜೋಶಿ, ‘‘ರಾಣಿ ಪದ್ಮಾವತಿ ತನ್ನ ಮುಖವನ್ನು ಅಲ್ಲಾವುದ್ದೀನ್ ಖಿಲ್ಜಿಗೆ ಎಂದೂ ತೋರಿಸಲಿಲ್ಲ. ಬದಲಿಗೆ ಆಕೆ ತನ್ನ 16 ಸಾವಿರ ಸಂಗಡಿಗ ಮಹಿಳೆಯರ ಜೊತೆ ಅಗ್ನಿಕುಂಡಕ್ಕೆ ಜಿಗಿದಳು. ಆದರೆ ನಿಮ್ಮ ಸರಕಾರವು ಸರಕಾರವು ಈ ಸ್ಥಳದ ಸುತ್ತ ಅಡೆತಡೆಗಳನ್ನು ನಿರ್ಮಿಸಿತ್ತು. ಆದರೆ ನಮ್ಮ ಸರಕಾರವು ಈ ತಾಣಕ್ಕೆ ಮಾನ್ಯತೆ ನೀಡಿದೆ ಎಂದು ಹೇಳಿದ್ದರು.

ಚಂದ್ರಪ್ರಕಾಶ್ ಅವರ ಹೇಳಿಕೆಯನ್ನು ಪ್ರತಿಪಕ್ಷಗಳ ಸದಸ್ಯರು ತೀವ್ರವಾಗಿ ಪ್ರತಿಭಟಿಸಿದರು ಹಾಗೂ ಸ್ಪೀಕರ್ ಪೀಠದ ಎದುರಿನ ಅಂಗಣಕ್ಕೆ ಧಾವಿಸಿದರು.

ಜೋಶಿ ಅವರು ಸತಿ ಪದ್ದತಿಯನ್ನು ವೈಭವೀಕರಿಸುತ್ತಿದ್ದಾರೆಂದು ಪ್ರತಿಪಕ್ಷ ಸದಸ್ಯರಾದ ಎನ್‌ಸಿಪಿಯ ಸುಪ್ರಿಯಾ ಸುಲೆ, ಡಿಎಂಕೆಯ ಎ. ರಾಜಾ, ಕಾಂಗ್ರೆಸ್‌ನ ಕೆ. ಮುರಳೀಧರನ್ ಹಾಗೂ ಎಐಎಂಐಎಂನ ಇಮ್ತಿಯಾಝ್ ಝಲೀಲ್ ಖಂಡಿಸಿದರು. ಸದನದಲ್ಲಿ ಗದ್ದಲ ನಿಲ್ಲದೆ ಇದ್ದಾಗ ಸ್ಪಿಕರ್ ಅವರು ಸಂಕ್ಷಿಪ್ತ ಅವಧಿಗೆ ಸದನವನ್ನು ಮುಂದೂಡಿದರು. ಮಧ್ಯಾಹ್ನದ ವೇಳೆ ಲೋಕಸಬಾ ಕಲಾಪ ಮತ್ತೆ ಆರಂಭಗೊಂಡಾಗ ಸಿಂಗ್ ಅವರು ತನ್ನ ಹೇಳಿಕೆಯ ಬಗ್ಗೆ ಸ್ಪಷ್ಟೀಕರಣ ನೀಡಿದರು.

‘‘ನನ್ನ ಭಾಷಣದಲ್ಲಾಗಲಿ, ನಾನಾಗಲಿ ಅಥವಾ ನನ್ನ ಪಕ್ಷವಾಗಲಿ ಸತಿ ಪದ್ದತಿಯನ್ನು ಆಚರಣೆಯನ್ನು ಬೆಂಬಲಿಸಿಲ್ಲ. ನನ್ನ ಭಾಷಣದ ಅನುವಾದದಲ್ಲಿ ಆದ ತಪ್ಪಿನಿಂದಾಗ ಈ ತಪ್ಪುತಿಳುವಳಿಕೆಯುಂಟಾಗಿದೆ. ನಾನು ನೇರ ನಡೆನುಡಿ ಹಾಗೂ ದಯಾಳು ವ್ಯಕ್ತಿತ್ವದವನೆಂದು ಹೇಳಲು ಇಚ್ಛಿಸುತ್ತೇನೆ. ನನ್ನ ತವರು ರಾಜ್ಯವಾದ ರಾಜಸ್ಥಾನದಲ್ಲಿ ಬಿಜೆಪಿ ನಾಯ ಭೈರೋನ್‌ಸಿಂಗ್ ಶೇಖಾವತ್ ಅವರು ಸತಿಪದ್ದತಿಯನ್ನು ಪ್ರಬಲವಾಗಿ ವಿರೋಧಿಸಿದ್ದರು ಎಂದರು.

‘‘ನಾನಾಗಲಿ ಅಥವಾ ನನ್ನ ಪಕ್ಷವಾಗಲಿ ಸತಿ ಪದ್ದತಿಯ ಆಚರಣೆಯನ್ನು ಒಪ್ಪುವುದಿಲ್ಲ. ರಾಜಕೀಯಕ್ಕಿಂತ ಮೊದಲು ದೇಶಸೇವೆಯೇ ನನ್ನ ಪಕ್ಷದ ಆದ್ಯತೆಯಾಗಿದೆ ಎಂದವರು ಹೇಳಿದರು.

ಮುಂದುವರಿದು ಮಾತನಾಡಿದ ಅವರು, ಮೀರಾ ಅವರ ಭಕ್ತಿಯ ಹಾಗೂ ಪದ್ಮಾವತಿ ಅವರ ತ್ಯಾಗದ ಭವ್ಯಪರಂಪರೆಯನ್ನು ಮೀರಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದರು.

Similar News