'ಕ್ರಿಮಿನಲ್‌ʼ ಬಗ್ಗೆ ಲೇಖನ ಬರೆದಿದ್ದ ಪತ್ರಕರ್ತ ಅದೇ 'ಕ್ರಿಮಿನಲ್‌' ವ್ಯಕ್ತಿಯ ಕಾರು ಢಿಕ್ಕಿ ಹೊಡೆದು ಮೃತ್ಯು

ಪ್ರಧಾನಿ, ಸಿಎಂ, ಡಿಸಿಎಂ ಜೊತೆ ಫೋಟೋದಲ್ಲಿದ್ದ ‘ಕ್ರಿಮಿನಲ್‌ʼ

Update: 2023-02-08 06:35 GMT

ಮುಂಬೈ: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ರಾಜಾಪುರದಲ್ಲಿ ಸ್ಥಳಿಯ ಮರಾಠಿ ದಿನಪತ್ರಿಕೆಗೆ ಕೆಲಸ ಮಾಡುವ 48 ವರ್ಷದ ಪತ್ರಕರ್ತ ಶಶಿಕಾಂತ್‌ ವರಿಶೆ ಎಂಬವರ ಮೇಲೆ ಎಸ್‌ಯುವಿಯೊಂದು ಹರಿದು ಅವರು ಮೃತಪಟ್ಟ ಬೆನ್ನಲ್ಲೇ ವಾಹನದ ಚಾಲಕನನ್ನು ಬಂಧಿಸಲಾಗಿದೆ. ಸೋಮವಾರವಷ್ಟೇ ಶಶಿಕಾಂತ್‌ ಅವರು ವ್ಯಕ್ತಿಯೊಬ್ಬರ ವಿರುದ್ಧ ಲೇಖನವೊಂದನ್ನು ಬರೆದಿದ್ದರೆ, ಅದೇ ವ್ಯಕ್ತಿ ಅವರ ಮೇಲೆ ವಾಹನ ಹರಿಸಿ ಅವರ ಸಾವಿಗೆ ಕಾರಣನಾಗಿದ್ದಾನೆ. ಆತನನ್ನು ಪಂಡರಿನಾಥ್‌ ಅಂಬೇರ್ಕರ್‌ ಎಂದು ಗುರುತಿಸಲಾಗಿದೆ.

ಬರ್ಸು ಎಂಬಲ್ಲಿ ತಲೆಯೆತ್ತುತ್ತಿರುವ  ಹಾಗೂ ಸ್ಥಳೀಯರ ಒಂದು ವರ್ಗ ವಿರೋಧಿಸುತ್ತಿರುವ ರತ್ನಗಿರಿ ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ಗೆ ಸಂಬಂಧಿಸಿದ ಲೇಖನಗಳನ್ನು ಶಶಿಕಾಂತ್‌ ಬರೆಯುತ್ತಿದ್ದರು.

ಸೋಮವಾರ ಅವರು ಪತ್ರಿಕೆ 'ಮಹಾನಗರಿ ಟೈಮ್ಸ್‌'ನಲ್ಲಿ ಪ್ರಕಟಿಸಿದ ವರದಿಯಲ್ಲಿ ರಿಫೈನರಿ ಕೈಗಾರಿಕೆ ಯೋಜನೆ ಬೆಂಬಲಿಸಿ ಹಂಚಿದ ಪೋಸ್ಟರ್‌ನಲ್ಲಿ ಇರುವ ವ್ಯಕ್ತಿಯ ಕ್ರಿಮಿನಲ್‌ ಹಿನ್ನೆಲೆಯ ಬಗ್ಗೆ ಉಲ್ಲೇಖಿಸಲಾಗಿತ್ತು. ರಿಫೈನರಿ ಯೋಜನೆಗೆ ಬೆಂಬಲಿಸಿ ಪ್ರಧಾನಿ, ಸಿಎಂ ಮತ್ತು ಡಿಸಿಎಂ ಚಿತ್ರಗಳೊಂದಿಗೆ ತನ್ನ ಚಿತ್ರವನ್ನು ಆರೋಪಿ ಪೋಸ್ಟರ್‌ ಮಾಡಿದ್ದ. ಲೇಖನದಲ್ಲಿ ಅಂಬೇರ್ಕರ್‌ ನನ್ನು ಕ್ರಿಮಿನಲ್‌, ಆತ ರಿಫೈನರಿ ಯನ್ನು ಬೆಂಬಲಿಸುತ್ತಿದ್ದಾನೆ ಮತ್ತು ರಿಫೈನರಿ ವಿರೋಧಿಸುತ್ತಿರುವ ಸ್ಥಳೀಯರನ್ನು ಬೆದರಿಸಿದ್ದಕ್ಕಾಗಿ ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಬರೆಯಲಾಗಿತ್ತು.

ಸೋಮವಾರ ಶಶಿಕಾಂತ್‌ ಅವರು ರಾಜಾಪುರ್‌ ಹೆದ್ದಾರಿ ಸಮೀಪದ ಪೆಟ್ರೋಲ್‌ ಬಂಕ್‌ ಪಕ್ಕ ನಿಂತಿದ್ದ ವೇಳೆ ತನ್ನ ಎಸ್‌ಯುವಿಯನ್ನು ಅಂಬೇರ್ಕರ್‌ ಶಶಿಕಾಂತ್‌ ಮೇಲೆ ಹರಿಸಿದ್ದ ಎಂದು ಆರೋಪಿಸಲಾಗಿದೆ. ಶಶಿಕಾಂತ್‌ ಅವರನ್ನು ಕೆಲವು ಮೀಟರ್‌ಗಳಷ್ಟು ದೂರ ಎಳೆದುಕೊಂಡ ನಂತರ ವಾಹನ ನಿಂತಿತ್ತು. ಅಂಬೇರ್ಕರ್‌ ಸ್ಥಳದಿಂದ ಪರಾರಿಯಾಗಿದ್ದ. ಗಂಭೀರ ಗಾಯಗಳುಂಟಾಗಿದ್ದ ಶಶಿಕಾಂತ್‌ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಮಂಗಳವಾರ ಮೃತಪಟ್ಟರು.

ಆರೋಪಿಯನ್ನು ಬಂಧಿಸಲಾಗಿದ್ದು ಹಾಗೂ ಆತನನ್ನು ನ್ಯಾಯಾಲಯ ಫೆಬ್ರವರಿ 14 ರ ತನಕ ಪೊಲೀಸ್‌ ಕಸ್ಟಡಿಗೆ ವಹಿಸಿದೆ.

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆಯ ಸಂಸದ ವಿನಾಯಕ್‌ ರಾವತ್‌, ಇದೊಂದು ಕೊಲೆಯಾಗಿದೆ ಹಾಗೂ ಈ ಕುರಿತು ಪ್ರಧಾನಿಗೆ ಪತ್ರ ಬರೆಯುವುದಾಗಿ ಹಾಗೂ ವಿಷಯವನ್ನು ಸಂಸತ್ತಿನಲ್ಲಿ ಎತ್ತುವುದಾಗಿ ತಿಳಿಸಿದ್ದಾರೆ.

Similar News