ಮೆಹಂದಿ ಹಚ್ಚಿಕೊಂಡು ಮೂರ್ಛೆ ಹೋದ ಬಾಲಕಿ: ಇದೊಂದು ಅಸಹಜ ಪ್ರಕರಣವೆಂದ ವೈದ್ಯರು

Update: 2023-02-08 08:28 GMT

ಹೊಸದಿಲ್ಲಿ: ಕೈಗೆ ಮೆಹಂದಿ ಹಚ್ಚಿಕೊಂಡು, ಅದರ ವಾಸನೆ ನೋಡಿದ್ದರಿಂದ ಒಂಬತ್ತು ವರ್ಷದ ಬಾಲಕಿಯೊಬ್ಬಳು ಮೂರ್ಛೆ ಹೋದ ಅಸಹಜ ಪ್ರಕರಣವನ್ನು ಖಾಸಗಿ ಆಸ್ಪತ್ರೆಯಾದ ಸರ್ ಗಂಗಾರಾಮ್ ಆಸ್ಪತ್ರೆಯ ವೈದ್ಯರು ವರದಿ ಮಾಡಿದ್ದಾರೆ.

ಈ ಪ್ರಕರಣದ ಅಧ್ಯಯನ ವರದಿಯು 'ಚಿಕಿತ್ಸಕ ನರ ಜೀವ ವಿಜ್ಞಾನ'ದ ಜನವರಿ, 2023ರ ಸಂಚಿಕೆಯಲ್ಲಿ ಪ್ರಕಟವಾಗಿದೆ ಎಂದು ಸರ್ ಗಂಗಾರಾಮ್ ಆಸ್ಪತ್ರೆಯು ಹೇಳಿಕೆಯಲ್ಲಿ ತಿಳಿಸಿದೆ. ಒಂಬತ್ತು ವರ್ಷದ ಬಾಲಕಿಯೊಬ್ಬಳು ಕೈಗೆ ಮೆಹಂದಿ ಹಚ್ಚಿಕೊಂಡ ನಂತರ ಮೂರ್ಛೆಗೆ ತುತ್ತಾಗಿರುವ ಅಸಹಜ ಪ್ರಕರಣವನ್ನು ಆಸ್ಪತ್ರೆಯ ನರ ವಿಜ್ಞಾನ ವಿಭಾಗವು ಇತ್ತೀಚೆಗೆ ವರದಿ ಮಾಡಿತ್ತು.

ಮೆಹಂದಿ ಹಚ್ಚಿಕೊಂಡ ನಂತರ ಮೊದಲ ಅಪಸ್ಮಾರಕ್ಕೆ ತುತ್ತಾದ ಆ ಬಾಲಕಿಯು, "ನಾನು ದಿಢೀರ್ ಪ್ರಜ್ಞಾಹೀನತೆಗೊಳಗಾಗಿ ಸುಮಾರು 20 ಸೆಕೆಂಡ್ ಕಾಲ ಮೂರ್ಛೆಗೆ ಒಳಗಾದೆ" ಎಂದು ಹೇಳಿದಳು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ನರ ವಿಜ್ಞಾನ ವಿಭಾಗದ ಹಿರಿಯ ಸಮಾಲೋಚಕ ವೈದ್ಯ ಡಾ. ಕರ್ನಲ್ ಪಿ.ಕೆ‌.ಸೇಠಿ, "ಇದೊಂದು ಅಸಹಜ ಪ್ರತಿಕ್ರಿಯಾತ್ಮಕ ಅಪಸ್ಮಾರವಾಗಿದೆ. ಇನ್ನಿತರ ಪ್ರಚೋದನಕಾರಿಯಲ್ಲದ ಮೂರ್ಛೆಗಳಿಗೆ ಹೋಲಿಸಿದರೆ, ಈ ಅಪಸ್ಮಾರವು ಸ್ಥಿರವಾಗಿ ಗುರುತಿಸಬಹುದಾದ ಮತ್ತು ನಿರ್ದಿಷ್ಟ ವಸ್ತುವಿನಿಂದ ಉಂಟಾಗಿರುವ ಮೂರ್ಛೆಯಾಗಿದೆ. ನಮಗೆ ವರದಿಯಾಗಿರುವ ಪ್ರಕರಣದ ಪ್ರಕಾರ, ಮೆಹಂದಿ ಹಚ್ಚಿರುವುದರಿಂದ ಸ್ಥಿರವಾದ ಮೂರ್ಛೆ ಉಂಟಾಗಿದೆ" ಎಂದು ಹೇಳಿದ್ದಾರೆ.

"ನಮ್ಮ ರೋಗಿಯಲ್ಲಿ ಮೂರ್ಛೆಯು ಕೇವಲ ಮೆಹಂದಿ ಹಚ್ಚಿಕೊಂಡಿರುವುದರಿಂದಷ್ಟೇ ಉಂಟಾಗಿಲ್ಲ. ಬದಲಿಗೆ, ಅದರ ವಾಸನೆಯು ಉದ್ರೇಕಕಾರಿ ಪದಾರ್ಥವಾಗಿ ಕೆಲಸ ಮಾಡಿ, ಶರೀರ ಜಾಲದ ಕಾರ್ಯವೈಖರಿಯನ್ನು ಉದ್ರೇಕಿಸಿರುವುದರಿಂದಾಗಿ ಉಂಟಾಗಿದೆ" ಎಂದು ಅವರು ತಿಳಿಸಿದ್ದಾರೆ.

ಬಾಲಕಿಗೆ Sodium Valporate ಔಷಧಿಯನ್ನು ಶಿಫಾರಸು ಮಾಡಿರುವ ವೈದ್ಯರು, ಮೆಹಂದಿಯಿಂದ ಬಾಲಕಿಯನ್ನು ದೂರವಿರಿಸುವಂತೆ ಸೂಚಿಸಿದ್ದಾರೆ. ಸದ್ಯ ಬಾಲಕಿಯ ಆರೋಗ್ಯ ಸ್ಥಿರವಾಗಿದ್ದು ಮತ್ತೆ ಮೂರ್ಛೆ ಕಾಣಿಸಿಕೊಂಡಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ನಟಿ ರಾಖಿ ಸಾವಂತ್ ಪತಿ ಆದಿಲ್ ದುರಾನಿಯನ್ನು ಬಂಧಿಸಿದ ಮುಂಬೈ ಪೊಲೀಸರು

Similar News