ದಂಪತಿಯಿಂದ ನಿರಂತರ ದೌರ್ಜನ್ಯಕ್ಕೀಡಾಗಿದ್ದ ಅಪ್ರಾಪ್ತೆ ಮನೆಗೆಲಸದಾಕೆಯನ್ನು ರಕ್ಷಿಸಿದ ಪೊಲೀಸರು: ಆರೋಪಿಗಳ ಬಂಧನ

ಉಳಿದ ಹಳಸಿದ ಆಹಾರವನ್ನು ಕಸದ ಬುಟ್ಟಿಯಿಂದ ತೆಗೆದು ತಿನ್ನುತ್ತಿದ್ದ ಬಾಲಕಿ

Update: 2023-02-08 09:45 GMT

ಗುರುಗ್ರಾಮ್‌ : ಕಳೆದ ಕೆಲ ತಿಂಗಳುಗಳಿಂದ ತನ್ನ ಮಾಲಕರಿಂದ ನಿರಂತರ ದೌರ್ಜನ್ಯಕ್ಕೀಡಾಗಿದ್ದ 13 ವರ್ಷದ ಮನಗೆಲಸದ ಬಾಲಕಿಯನ್ನು  ಮಂಗಳವಾರ ಸಂಜೆ ಪೊಲೀಸರು ರಕ್ಷಿಸಿದ್ದಾರೆ. ಗುರುಗ್ರಾಮ ಮೂಲದ ಎನ್‌ಜಿಒ ಒಂದು ಬಾಲಕಿಯ ಪರಿಸ್ಥಿತಿಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಕಾರ್ಯಾಚರಣೆ ನಡೆದು ಬಾಲಕಿಯನ್ನು ತಮ್ಮ ಮನೆಯಲ್ಲಿ ಕೆಲಸಕ್ಕಿರಿಸಿದ್ದ ದಂಪತಿಯನ್ನು ಬಂಧಿಸಿದ್ದಾರೆ.

ಜಾರ್ಖಂಡ್‌ ಮೂಲದ ಬಾಲಕಿಯ ಮೈತುಂಬಾ ಗಾಯಗಳಿವೆ. ಆಕೆಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬ ಕುರಿತೂ ಪರಿಶೀಲಿಸಲಾಗುವುದೆಂದು ತಿಳಿದು ಬಂದಿದೆ.

ದಂಪತಿ ಬಾಲಕಿಗೆ ಬಿಸಿ ಸೌಟುಗಳು ಹಾಗೂ ಬೆತ್ತಗಳಿಂದ ಥಳಿಸಿದ್ದಾರೆ. ಆಕೆಗೆ ಆಹಾರ ನೀಡದೆ ಸತಾಯಿಸಿ ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂದು ದಬಾಯಿಸುತ್ತಿದ್ದರಲ್ಲದೆ ಆಹಾರ ಕದಿಯುತ್ತಿದ್ದ ಆರೋಪವನ್ನೂ ಹೊರಿಸಿದ್ದಾರೆ.

ಹಲವಾರು ದಿನಗಳಿಂದ ಆಹಾರ ದೊರೆಯದೆ ಉಳಿದ ಹಳಸಲು ಆಹಾರವನ್ನು ಕಸದ ಬುಟ್ಟಿಯಿಂದ ತೆಗೆದು ಬಾಲಕಿ ತಿನ್ನುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಪ್ಲೇಸ್ಮೆಂಟ್‌ ಏಜನ್ಸಿಯೊಂದರ ಮುಖಾಂತರ  ದಂಪತಿ ತಮ್ಮ ಮೂರು ವರ್ಷದ ಪುತ್ರಿಯ ಆರೈಕೆಗಾಗಿ ಆಕೆಯನ್ನು ನೇಮಿಸಿದ್ದರೆಂದು ತಿಳಿದು ಬಂದಿದೆ. ಅವರ ವಿರುದ್ಧ ಬಾಲ ನ್ಯಾಯ ಕಾಯಿದೆ, ಪೋಕ್ಸೋ ಮತ್ತಿತರ ಕಾಯಿದೆಗಳಡಿ ದೂರು ದಾಖಲಾಗಿದೆ.

ಬಂಧಿತ ಮಹಿಳೆಯನ್ನು ಆಕೆ ಉದ್ಯೋಗದಲ್ಲಿರುವ ಸಂಸ್ಥೆ ಕೆಲಸದಿಂದ ತೆಗೆದುಹಾಕಿದೆ ಎಂದು ತಿಳಿದು ಬಂದಿದೆ.

Similar News