ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಹಕ್ಕು ಚ್ಯುತಿ ನಿರ್ಣಯ ಮಂಡಿಸಲು ಬಿಜೆಪಿ ಸಂಸದ ದುಬೆ ಆಗ್ರಹ

Update: 2023-02-08 09:58 GMT

ಹೊಸದಿಲ್ಲಿ: ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ  ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರೊಂದಿಗೆ ಪ್ರಧಾನಿ ಬಾಂಧವ್ಯದ ಬಗ್ಗೆ ಕೆಲವು ಆರೋಪಗಳನ್ನು ಮಾಡಿದ  ಮರುದಿನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಹಕ್ಕು ಚ್ಯುತಿ ನಿರ್ಣಯ ನೋಟಿಸ್ ಅನ್ನು ಮಂಡಿಸುವಂತೆ ಬಿಜೆಪಿ  ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭೆ ಸ್ಪೀಕರ್‌ಗೆ ಬುಧವಾರ ಪತ್ರ ಬರೆದಿದ್ದಾರೆ.

 “ಈ ಹೇಳಿಕೆಗಳು ಸದನದ ಘನತೆಗೆ ಹಾಗೂ  ಲೋಕಸಭೆಯ ಸದಸ್ಯರಾಗಿರುವ ಪ್ರಧಾನಿಯವರಿಗೆ ಅವಹೇಳನಕಾರಿ, ಅಸಭ್ಯ, ಅಸಂಸದೀಯ, ಘನತೆಯಿಲ್ಲದ ಹಾಗೂ  ದೋಷಾರೋಪಣೆ ಮಾಡುವಂತಿವೆ. ರಾಹುಲ್ ಗಾಂಧಿ ಅವರು ಸದನದಲ್ಲಿ ಸಾಕ್ಷ್ಯಚಿತ್ರದ ಸಾಕ್ಷ್ಯಗಳನ್ನು ನೀಡುವುದಾಗಿ ಹೇಳಿಕೆ ನೀಡಿದ್ದರೂ ಅವರ ಹೇಳಿಕೆಗಳನ್ನು ಸಮರ್ಥಿಸಲು ಯಾವುದೇ ಅಧಿಕೃತ ದಾಖಲೆಗಳನ್ನು ಸಲ್ಲಿಸಿಲ್ಲ'' ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ  ಬರೆದಿರುವ ಪತ್ರದಲ್ಲಿ  ದುಬೆ ಹೇಳಿದ್ದಾರೆ.

ಕಾಂಗ್ರೆಸ್ ಸಂಸದರು ಯಾವುದೇ ದಾಖಲೆ ಸಾಕ್ಷ್ಯಾಧಾರಗಳ ಅನುಪಸ್ಥಿತಿಯಲ್ಲಿ ಸದನವನ್ನು ದಾರಿ ತಪ್ಪಿಸುವ ಹೇಳಿಕೆಯನ್ನು ನೀಡಿದ್ದಾರೆ. ಈ ನಡವಳಿಕೆಯು ಸದನ ಹಾಗೂ  ಅದರ ಸದಸ್ಯರ ಗೌರವದ   ಸ್ಪಷ್ಟ ಉಲ್ಲಂಘನೆಯಾಗಿದೆ ಜೊತೆಗೆ ಸದನದ ತಿರಸ್ಕಾರದ ಸ್ಪಷ್ಟ ಪ್ರಕರಣವಾಗಿದೆ. ಹಕ್ಕುಚ್ಯುತಿ  ಉಲ್ಲಂಘನೆ ಹಾಗೂ  ಸದನದ ಅವಹೇಳನಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ನಾನು ವಿನಂತಿಸುತ್ತೇನೆ''ಎಂದು ಪತ್ರದಲ್ಲಿ ಬರೆಯಲಾಗಿದೆ.

Similar News