ಸಮಾನ ನಾಗರಿಕ ಸಂಹಿತೆ ಅಪ್ರಸ್ತುತ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

Update: 2023-02-08 09:19 GMT

ಲಕ್ನೋ: ಪ್ರಸ್ತಾವಿ ಸಮಾನ ನಾಗರಿಕ ಸಂಹಿತೆ (UCC) ಅಪ್ರಸ್ತುತವಾಗಿದ್ದು, ಭಾರತದಂತಹ ವಿವಿಧ ಧರ್ಮಗಳಿರುವ, ಬಹುಸಂಸ್ಕೃತಿಯ ಮತ್ತು ಬಹುಭಾಷೆಯ ದೇಶಗಳಿಗೆ ಪ್ರಯೋಜನಕಾರಿಯೂ ಅಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಹೇಳಿದೆ. 

ಇದನ್ನು ಅನುಷ್ಠಾನಕ್ಕೆ ತರುವುದರಿಂದ ಅವರಿಗೆ ನೀಡಲಾದ "ವೈಯಕ್ತಿಕ ಕಾನೂನು" ಸೌಲಭ್ಯವನ್ನು ನಿರಾಕರಿಸಿದಂತಾಗುತ್ತದೆ ಹಾಗೂ ಇದು ಸಂವಿಧಾನದ ಸ್ಫೂರ್ತಿಗೆ ವಿರುದ್ಧ ಎಂದು ಅಭಿಪ್ರಾಯಪಟ್ಟಿದೆ.

"ಸಂಸತ್ತಿನಲ್ಲಿ ಬಹುಮತ ಇರುವ ಅಂಶದ ಪ್ರಯೋಜನ ಪಡೆದುಕೊಂಡು ಸರ್ಕಾರ ಯುಸಿಸಿ ಆಂಗೀಕರಿಸಿ ಜಾರಿಗೆ ತಂದಲ್ಲಿ, ಇದು ದೇಶದ ಏಕತೆಗೆ ಮತ್ತು ಸಾಮರಸ್ಯದ ಬಂಧಕ್ಕೆ ಧಕ್ಕೆ ತರಲಿದೆ. ಇದು ದೇಶದ ಪ್ರಗತಿಗೆ ಮಾರಕವಾಗಲಿದ್ದು, ಯಾವುದೇ ಫಲಪ್ರದ ಫಲಿತಾಂಶ ನೀಡಲು ಸಾಧ್ಯವಿಲ್ಲ" ಎಂದು ಲಕ್ನೋದ ನಸ್ವತುಲ್ ಉಲೆಮಾದಲ್ಲಿ ನಡೆದ ಸಮಿತಿಯ ಆಡಳಿತ ಮಂಡಳಿ ಸಭೆಯಲ್ಲಿ ಅಭಿಪ್ರಾಯಕ್ಕೆ ಬರಲಾಗಿದೆ.

ಮುಸ್ಲಿಂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಲು ಹಾಗೂ ಅದು ಬೆಳೆಯಲು ಅನುಕೂಲವಾಗುವಂತೆ ಮುಸ್ಲಿಮರು ಹೆಚ್ಚು ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಬೇಕು ಎಂದು ಮಂಡಳಿ ಮನವಿ ಮಾಡಿದೆ.

"ಧರ್ಮ ಹಾಗೂ ನಿಷ್ಠೆ ಎನ್ನುವುದು ಅವರವರ ನಂಬಿಕೆ ಹಾಗೂ ಆತ್ಮಸಾಕ್ಷಿಗೆ ಬಿಟ್ಟ ವಿಚಾರ. ಇದರಲ್ಲಿ ಯಾವುದೇ ಹಸ್ತಕ್ಷೇಪ ಬೇಡ ಎಂದು ಮಂಡಳಿ ಸ್ಪಷ್ಟಪಡಿಸಿದೆ.

"ಒಂದು ಧರ್ಮವನ್ನು ಅನುಸರಿಸುವ ನಿರ್ಧಾರ ಸಹಜ. ಸಂವಿಧಾನ ಇದನ್ನು ಮೂಲಭೂತ ಹಕ್ಕಾಗಿ ಗೌರವಿಸಿದೆ. ಆದ್ದರಿಂದ ಪ್ರತಿಯೊಬ್ಬರಿಗೂ ಅವರ ಆಯ್ಕೆಯ ಧರ್ಮ ಆಚರಿಸುವ ಹಕ್ಕು ಇದೆ. ಆದಾಗ್ಯೂ ಹಲವು ರಾಜ್ಯಗಳಲ್ಲಿ ನಾಗರಿಕ ಈ ಮೂಲ ಹಕ್ಕನ್ನು ನಿರಾಕರಿಸಲಾಗಿದೆ. ಇದು ಸ್ವೀಕಾರಾರ್ಹವಲ್ಲ. ಅಲ್ಲದೇ ಅವರ ಸ್ವಂತ ಇಚ್ಛೆಯಂತೆ ಒಂದು ಧರ್ಮದಿಂದ ಇನ್ನೊಂದಕ್ಕೆ ಬದಲಾಗಲು ಸ್ವತಂತ್ರರು" ಎಂದು ಹೇಳಿದೆ.

ಇದನ್ನು ಓದಿ: ಮೆಹಂದಿ ಹಚ್ಚಿಕೊಂಡು ಮೂರ್ಛೆ ಹೋದ ಬಾಲಕಿ: ಇದೊಂದು ಅಸಹಜ ಪ್ರಕರಣವೆಂದ ವೈದ್ಯರು

Similar News