2 ಕಿಮೀ ಉದ್ದದ ರೈಲ್ವೆ ಹಳಿಯನ್ನೇ ಕಳವುಗೈದ ಕಳ್ಳರು; ಇಬ್ಬರು ಆರ್‌ಪಿಎಫ್‌ ಸಿಬ್ಬಂದಿ ವಜಾ

Update: 2023-02-08 12:16 GMT

ಪಾಟ್ನಾ: ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸುಮಾರು 2 ಕಿಮೀ ಉದ್ದದ ನಿರುಪಯೋಗಿ ರೈಲ್ವೆ ಹಳಿಯನ್ನು ಕದ್ದು ಅದನ್ನು ಗುಜರಿ ವ್ಯಾಪಾರಿಗಳಿಗೆ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು. ಈ ಕಳ್ಳತನಕ್ಕೆ ಸಹಕಾರ ನೀಡಿದ ಆರೋಪದ ಮೇಲೆ ಇಬ್ಬರು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಸಮಸ್ತಿಪುರ್‌ ರೈಲ್ವೆ ವಿಭಾಗದಡಿಯಲ್ಲಿ ಬರುವ ಹಾಗೂ ಜಿಲ್ಲೆಯ ಪಂಡೌಲ್‌ ಮತ್ತು ಲೋಹತ್‌ ಶುಗರ್‌ ಮಿಲ್‌ ನಡುವೆ ಈ ಹಳಿ ಸಂಪರ್ಕ ಹೊಂದಿತ್ತು. ಆದರೆ ಮಿಲ್‌ ಬಂದ್‌ ಆಗಿದ್ದರಿಂದ ಹಳಿ ನಿರುಪಯೋಗಿಯಾಗಿತ್ತು.

ರೈಲ್ವೆ ಉದ್ಯೋಗಿಗಳೆಂದು ಹೇಳಿಕೊಂಡು ಬಂದ ಕಳ್ಳರು ಹಳಿಯನ್ನು ತುಂಡರಿಸಿ ಗುಜರಿ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದರೆನ್ನಲಾಗಿದೆ. ಹಳಿಗಳು ಕಾಣದೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಮತ್ತು ರೈಲ್ವೆ ಸುರಕ್ಷತಾ ಪಡೆ ತನಿಖೆ ನಡೆಸಿದಾಗ ಇಬ್ಬರು ಸ್ಥಳೀಯ ಆರ್‌ಪಿಎಫ್‌ ಸಿಬ್ಬಂದಿಗಳಾದ ಮುಕೇಶ್‌ ಕುಮಾರ್‌ ಸಿಂಗ್‌ ಮತ್ತು ಶ್ರೀನಿವಾಸ್‌ ಕಳ್ಳರೊಂದಿಗೆ ಶಾಮೀಲಾಗಿದ್ದರೆಂದು ತಿಳಿದು ಕರ್ತವ್ಯಲೋಪ ಆರೋಪ ಹೊರಿಸಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಇದನ್ನೂ ಓದಿ: ದಂಪತಿಯಿಂದ ನಿರಂತರ ದೌರ್ಜನ್ಯಕ್ಕೀಡಾಗಿದ್ದ ಅಪ್ರಾಪ್ತೆ ಮನೆಗೆಲಸದಾಕೆಯನ್ನು ರಕ್ಷಿಸಿದ ಪೊಲೀಸರು: ಆರೋಪಿಗಳ ಬಂಧನ

Similar News