ಫೆ.17-ಮಾ.4: ಪೊಯ್ಯತ್ತಬೈಲ್ ಮಖಾಂ ಉರೂಸ್

Update: 2023-02-08 10:54 GMT

ಮಂಗಳೂರು, ಫೆ.8: ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನಲ್ಲಿರುವ ಪೊಯ್ಯತ್ತಬೈಲ್ ಮಣವಾಟಿ ಬೀವಿ(ರ.) ದುರ್ಗಾ ಶರೀಫ್ ಮಖಾಂ ಉರೂಸ್ ಈ ಬಾರಿ ಫೆ.17ರಿಂದ ಮಾರ್ಚ್ 4ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ಪೊಯ್ಯತ್ತಬೈಲ್ ಜುಮಾ ಮಸೀದಿಯ ಖತೀಬ್ ಅಬ್ದುಲ್ ಜಬ್ಬಾರ್ ಸಖಾಫಿ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಫೆ.17ರಂದು ಪೊಯ್ಯತ್ತಬೈಲು ಸದರ್ ಮುದರ್ರಿಸ್ ಶೈಖುನಾ ಅಬ್ದುಲ್ ಮಜೀದ್ ಫೈಝಿ ಉಸ್ತಾದ್ ನೇತೃತ್ವದಲ್ಲಿ ಉರೂಸ್ ಆರಂಭಗೊಳ್ಳಲಿದೆ. ಮಾರ್ಚ್ 5ರಂದು ಹಗಲು ಅನ್ನದಾನ ಸಮರ್ಪಣೆ ನಡೆಯಲಿದೆ. ಮಂಜೇಶ್ವರ ಸಂಯುಕ್ತ ಜಮಾಅತ್‌ ಅಧ್ಯಕ್ಷ ಸೈಯದ್ ಅಥಾವುಲ್ಲಾ ತಂಙಳ್ ಎಂ.ಎ. ಧ್ವಜಾರೋಹಣ ನೆರವೇರಿಸಲಿದ್ದಾರೆ. ಉರೂಸ್ ಸಮಿತಿಯ ಅಧ್ಯಕ್ಷ ಡಿ.ಎಂ.ಕೆ.ಮುಹಮ್ಮದ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಕೇರಳ ಹಾಗೂ ಕರ್ನಾಟಕದ ಸಂಗಮ ಸ್ಥಳವಾದ ಪೊಯ್ಯತ್ತಬೈಲು ಸರ್ವಧರ್ಮೀ ಯರ ಸೌಹಾರ್ದ ಕೇಂದ್ರವಾಗಿದೆ. ಜಾತಿ, ಮತ, ಪಂಗಡಗಳ ಭೇದವಿಲ್ಲದೆ ಇಲ್ಲಿನ ದರ್ಗಾಕ್ಕೆ ಸಾವಿರಾರು ಮಂದಿ ವಿವಿಧ ರಾಜ್ಯಗಳಿಂದ ಆಗಮಿಸುತ್ತಾರೆ. ಈ ಬಾರಿಯೂ ಸುಮಾರು 40ರಿಂದ 50 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಉರೂಸ್ ಸಮಿತಿಯ ಅಧ್ಯಕ್ಷ ಮತ್ತು ಪೊಯ್ಯತ್ತ ಬೈಲ್ ಜಮಾಅತ್ ಕಮಿಟಿ ಅಧ್ಯಕ್ಷ ಡಿ.ಎಂ.ಕೆ.ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಹನೀಫ್ ಪಿ.ಕೆ., ಕೋಶಾಧಿಕಾರಿ ಸಿದ್ದೀಕ್ ಹಾಜಿ ಟಿ.ಎ., ಮುಹಮ್ಮದ್, ಪ್ರಚಾರ ಸಮಿತಿಯ ಮುಹಮ್ಮದ್ ಹಾಜಿ ಅಸನಬೈಲ್ ಉಪಸ್ಥಿತರಿದ್ದರು.

Similar News