ರೋಹಿತ್ ಚಕ್ರತೀರ್ಥರಂತಹ ಇನ್ನು 10 ಮಂದಿ ಕರೆಯುತ್ತೇವೆ: ಸಚಿವ ಸುನೀಲ್ ಕುಮಾರ್

ರಾಜ್ಯ ಯಕ್ಷಗಾನ ಸಮ್ಮೇಳನ ವಿವಾದ

Update: 2023-02-08 12:45 GMT

ಉಡುಪಿ: ರಾಷ್ಟ್ರೀಯ ವಿಚಾರಧಾರೆಯನ್ನು ಹೊಂದಿರುವ ಲೇಖಕ ಹಾಗೂ ಸಾಹಿತಿಯೂ ಆಗಿರುವ ರೋಹಿತ್ ಚತ್ರತೀರ್ಥರನ್ನು ಯಕ್ಷಗಾನ ರಾಜ್ಯ ಸಮ್ಮೇಳನಕ್ಕೆ ಕರೆಯುವುದು ತಪ್ಪಲ್ಲ. ರೋಹಿತ್ ಚಕ್ರತೀರ್ಥ ಮಾತ್ರವಲ್ಲ ರಾಷ್ಟ್ರೀಯ ವಿಚಾರಧಾರೆ ಹೊಂದಿರುವ ಇನ್ನು 10 ಮಂದಿಯನ್ನು ಕರೆಯುತ್ತೇವೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲದರಲ್ಲೂ ತಪ್ಪು ಹುಡುಕುವುದು ಮತ್ತು ವಿಕೃತಿಯನ್ನು ಯೋಚಿಸುವುದು ಸರಿಯಲ್ಲ. ನಮ್ಮ ಸರಕಾರ ರಾಷ್ಟ್ರೀಯ ವಿಚಾರಧಾರೆಗಳನ್ನು ಬೆಂಬಲಿಸುತ್ತದೆ. ಆ ವಿಚಾರಧಾರೆಯಡಿಯೇ ಕೆಲಸ ಮಾಡುವ ಪಕ್ಷ ನಮ್ಮದು ಎಂದರು.

ಫೆ.11 ಮತ್ತು 12ರಂದು ರಾಜ್ಯ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯಲಿರುವ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನದ ಎರಡು ದಿನಗಳಲ್ಲಿ 2ಸಾವಿರ ಯಕ್ಷಗಾನ ಕಲಾವಿದರು ಸೇರಿದಂತೆ ಸುಮಾರು 50ಸಾವಿರಕ್ಕೂ ಅಧಿಕ ಭಾಗವಹಿಸುವ ನಿರೀಕ್ಷೆ ಇದೆ. ಮುಖ್ಯಮಂತ್ರಿಗೆ ಈಗಾಗಲೇ ಆಹ್ವಾನ ಕೊಟ್ಟಿದ್ದೇವೆ. ಅದೇ ದಿನ ಮಂಗಳೂರಿನಲ್ಲಿ ಅಮಿತ್ ಶಾ ಕಾರ್ಯಕ್ರಮ ಇರುವುದರಿಂದ ಸ್ವಲ್ಪ ಸಮಯದ ಹೊಂದಾಣಿಕೆ ಮಾಡಿಕೊಂಡು ಬರುತ್ತಾರೆಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಅವರು ಹೇಳಿದರು. 

ಕುಮಾರಸ್ವಾಮಿಯ ಬ್ರಾಹ್ಮಣ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಟುಂಬದ ಆಧಾರದಲ್ಲಿ ಮುಖ್ಯಮಂತ್ರಿ ಆಗುವಂತಹ ಅರ್ಹತೆ ಇರುವುದು ಜೆಡಿಎಸ್ ಪಕ್ಷದಲ್ಲಿ ಮಾತ್ರ. ಆದರೆ ಬಿಜೆಪಿಯಲ್ಲಿ ಕುಟುಂಬದ ಆಧಾರಿತವಾಗಿಯೂ ಜಾತಿಯ ಆಧಾರಿತವಾಗಿಯೂ ಮುಖ್ಯಮಂತ್ರಿ ಆಗುವುದಿಲ್ಲ. ನಮ್ಮ ಪಕ್ಷದಲ್ಲಿ ನಿಷ್ಠೆ, ಅನುಭವದ ಆಧಾರದಲ್ಲಿ ಮುಖ್ಯಮಂತ್ರಿ ಆಗುತ್ತಾರೆ ಹೊರತು ಯಾರದ್ದೊ ಮಗ, ಯಾವುದೋ ಜಾತಿ ಎಂಬ ಕಾರಣಕ್ಕೆ ಆಗಲ್ಲ. ಮುಖ್ಯ ಮಂತ್ರಿ ನಿರ್ಧಾರವನ್ನು ನಮ್ಮ ಹೈಕಮಾಂಡ್ ಮಾಡುತ್ತದೆ ಎಂದರು.

ಬ್ರಾಹ್ಮಣ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ಕೀಳಾಗಿ ಮಾತನಾಡುವುದು ಓರ್ವ ಮುಖ್ಯಮಂತ್ರಿ ಆಗಿದ್ದವರಿಗೆ ಶೋಭೆ ತರುವುದಿಲ್ಲ. ಯಾರಿಗೆ ಅರ್ಹತೆ ಇದೆ ಅಂಥವರು ಯಾರು ಬೇಕಾದರೂ ಮುಖ್ಯಮಂತ್ರಿ ಅಗಬಹುದು. ಜಾತಿಯ ಆಧಾರದಲ್ಲಿ ಯಾಕೆ ಮುಖ್ಯಮಂತ್ರಿ ಮಾಡಬೇಕು. ಜೆಡಿಎಸ್ ಮತ್ತು ಕಾಂಗ್ರೆಸ್ ರಾಜ್ಯದ ಅಭಿವೃದ್ಧಿಯನ್ನು ಕಣ್ಣು ಮುಂದೆ ಇಟ್ಟುಕೊಂಡು ಯಾವುದೇ ಚುನಾವಣೆಯನ್ನು ಮಾಡಿಲ್ಲ. ಜಾತಿಯ ಆಧಾರದಲ್ಲಿ ಸಮಾಜವನ್ನು ವಿಭಜಿಸುವ ಕೆಲಸವನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿವೆ ಎಂದು  ಅವರು ಆರೋಪಿಸಿದರು. 

ಅಮಿತ್ ಶಾ ಅವರ ಮಂಗಳೂರು ಸಮಾವೇಶದಲ್ಲಿ ಒಂದು ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಅಮಿತ್ ಶಾ ಬರುತ್ತಾರೆ ಅಂದರೆ ಸಹಜವಾಗಿ ಚುನಾವಣೆಗೆ ವೇಗ ಸಿಕ್ಕೆ ಸಿಗುತ್ತದೆ. ಈ ಎರಡು ಜಿಲ್ಲೆಯ ಎಲ್ಲ ಕ್ಷೇತ್ರಗಳನ್ನು ಗೆಲ್ಲುವ ನಿಟ್ಟಿನಲ್ಲಿ ತಯಾರಿಯನ್ನು ಮಾಡುತ್ತಿದ್ದೇವೆ. ಹಿಂದುತ್ವ ಮತ್ತು  ಅಭಿವೃದ್ಧಿಯ ಕಾರಣಕ್ಕೆ ಜಿಲ್ಲೆಯ ಮತದಾರರು ಬಿಜೆಪಿಯ ಕೈ ಹಿಡಿಯುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವಿದ್ಯುತ್ ದರ ಏರಿಕೆ ಬಗ್ಗೆ ಎಸ್ಕಾಂ ಪ್ರತಿವರ್ಷ ಕೂಡ ಮುಂದಿನ ಬಜೆಟ್ ಯೋಜನೆ ಇಟ್ಟುಕೊಂಡು ತನ್ನ ಅಭಿಪ್ರಾಯವನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಮುಂದೆ ಹೇಳುತ್ತದೆ. ಆಯೋಗ ಅದಾಲತ್ ಮೂಲಕ ಸಾರ್ವಜನಿಕ ಅಭಿಪ್ರಾಯ ಪಡೆಯುತ್ತದೆ. ನಂತರ ಸಾರ್ವಜನಿಕರ ಮತ್ತು ಎಸ್ಕಾಂ ಅಭಿಪ್ರಾಯ ಪಡೆದು ಆಯೋಗ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ. ಇದು ಇಷ್ಟು ವರ್ಷ ಮಾಡಿಕೊಂಡ ಪದ್ಧತಿ ಎಂದರು.

‘ಕರ್ನಾಟಕದ ರಾಜ್ಯದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಮತ್ತು ಪರಮೋಚ್ಛವಾದ ಸ್ಥಾನಮಾನ ಇರುತ್ತದೆ. ಕನ್ನಡ ಮತ್ತು ಕನ್ನಡಿಗರ ಜೊತೆ ತುಳುನಾಡು ಅವಿನಾಭ ಸಂಬಂಧ ಇಟ್ಟುಕೊಂಡಿದೆ. ನಾವು ಪ್ರತ್ಯೇಕ ತುಳುನಾಡು ಕೇಳುತ್ತಿಲ್ಲ. ತುಳು ಭಾಷೆಗೆ ಎರಡನೇ ಆದ್ಯತೆ ಕೊಡಿ ಎಂದು ಕೇಳುತ್ತಿದ್ದೇವೆ. ತುಳುವಿಗೆ ಎರಡನೇ ರಾಜ್ಯ ಭಾಷೆಯ ಸ್ಥಾನಮಾನ ನೀಡುವ ಸಂಬಂಧ ಸಾಧಕ ಬಾಧಕಗಳನ್ನು ತಿಳಿಯಲು ಸಮಿತಿ ರಚನೆ ಮಾಡಲಾಗಿದೆ. ಆ ಸಮಿತಿ ನೀಡಿದ ವರದಿ ನೋಡಿ ಕೊಂಡು ಸರಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ’
-ಸುನೀಲ್ ಕುಮಾರ್, ಸಚಿವರು

Similar News