ರಾಜ್ಯಸಭೆಯಲ್ಲಿ ಪ್ರತಿಪಕ್ಷದ ‘ಮೋದಿ-ಅದಾನಿ ಭಾಯಿ ಭಾಯಿ’ ಘೋಷಣೆಗಳ ನಡುವೆಯೇ ಸರಕಾರವನ್ನು ಹೊಗಳಿದ ಪ್ರಧಾನಿ

Update: 2023-02-09 16:12 GMT

ಹೊಸದಿಲ್ಲಿ,ಫೆ.9: ಗುರುವಾರ ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸದಸ್ಯರಿಂದ ‘ಮೋದಿ-ಅದಾನಿ ಭಾಯಿ ಭಾಯಿ’ ಘೋಷಣೆಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗಳಿಗೆ ಉತ್ತರಿಸಿದರು.

ಕೇಂದ್ರ ಸರಕಾರವು ಅದಾನಿ ಗ್ರೂಪ್‌(Adani Group)ಗೆ ಒಲವು ತೋರಿದೆ ಎಂಬ ಆರೋಪಗಳಿಗೆ ಪ್ರಧಾನಿಯವರು ಉತ್ತರಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿವೆ.

ಪ್ರತಿಪಕ್ಷ ಸಂಸದರ ಪ್ರತಿಭಟನೆಗಳ ನಡುವೆಯೇ ಮೋದಿ ತನ್ನ ಭಾಷಣವನ್ನು ಮುಂದುವರಿಸಿದಾಗ ಅವರಲ್ಲಿ ಕೆಲವರು ‘ಕುಚ್ ತೋ ಬೋಲೊ (ಕನಿಷ್ಠ ಏನನ್ನಾದರೂ ಹೇಳಿ)’ ಎಂದು ಘೋಷಣೆಗಳನ್ನು ಕೂಗಿದರು.

ಸಂಸತ್ತಿನಲ್ಲಿಯ ಕೆಲವು ವ್ಯಕ್ತಿಗಳ ನಡವಳಿಕೆ ಮತ್ತು ಭಾಷೆ ಇಡೀ ದೇಶವನ್ನೇ ನಿರಾಶೆಗೊಳಿಸಿದೆ ಎಂದ ಮೋದಿ,‘ಇಂತಹ ಮನಃಸ್ಥಿತಿಯನ್ನು ಹೊಂದಿದವರಿಗೆ ನಾನು ಒಂದೇ ಮಾತನ್ನು ಹೇಳಲು ಬಯಸುತ್ತೇನೆ;ನೀವು ಹೆಚ್ಚು ಕೆಸರನ್ನು ಎರಚಿದಷ್ಟೂ ಕಮಲವು ಹೆಚ್ಚು ಅರಳುತ್ತದೆ’ ಎಂದು ಬಿಜೆಪಿಯ ಚುನಾವಣಾ ಚಿಹ್ನೆಯನ್ನು ಉಲ್ಲೇಖಿಸಿ ನುಡಿದರು.

ಕಾಂಗ್ರೆಸ್ ‘ಗರೀಬಿ ಹಟಾವೊ’ ಮಂತ್ರವನ್ನು ಜಪಿಸುತ್ತಿತ್ತು,ಆದರೆ ಅದನ್ನು ಸಾಧಿಸಲು ಅದು ತನ್ನ ಅಧಿಕಾರಾವಧಿಯಲ್ಲಿ ಏನನ್ನೂ ಮಾಡಿರಲಿಲ್ಲ. 60 ವರ್ಷಗಳಲ್ಲಿ ಕಾಂಗ್ರೆಸ್ ಹೆಚ್ಚೆಚ್ಚು ರಂಧ್ರಗಳನ್ನಷ್ಟೇ ಸೃಷ್ಟಿಸಿತ್ತು. ಈ ನಡುವೆ ಸಣ್ಣ ದೇಶಗಳೂ ಯಶಸ್ಸಿನ ಉತ್ತುಂಗವನ್ನು ತಲುಪಿದ್ದವು ಎಂದು ಮೋದಿ ಕುಟುಕಿದರು.

‘ದೇಶಕ್ಕೆ ಸ್ವಾತಂತ್ರ ಲಭಿಸಿದ ಬಳಿಕ 2014ರವರೆಗೂ ಕೇವಲ 14 ಕೋಟಿ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸಲಾಗಿತ್ತು,ಆದರೆ ಪ್ರತಿಯೊಂದು ಮನೆಗೂ ಎಲ್‌ಪಿಜಿ ಸಂಪರ್ಕ ನೀಡಲು ನಾವು ನಿರ್ಧರಿಸಿದ್ದೆವು. ಎಲ್ಲ ಸಮಸ್ಯೆಗಳ ಹೊರತಾಗಿಯೂ ನಾವು 32 ಕೋಟಿಗೂ ಅಧಿಕ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕವನ್ನು ಒದಗಿಸಿದ್ದೇವೆ ’ ಎಂದು ಮೋದಿ ಹೇಳಿದರು. ಅದಾನಿ ವಿರುದ್ಧದ ವಂಚನೆ ಆರೋಪಗಳ ಕುರಿತು ಚರ್ಚೆಗೆ ಪ್ರತಿಪಕ್ಷಗಳ ಪಟ್ಟಿನಿಂದಾಗಿ ಮೋದಿ ಭಾಷಣದುದ್ದಕ್ಕೂ ಸದನದಲ್ಲಿ ಕೋಲಾಹಲ ಮುಂದುವರಿದಿತ್ತು.

ಆದರೆ ಅದಾನಿ ಕುರಿತು ಮಾತನಾಡುವುದರಿಂದ ದೂರವುಳಿದ ಮೋದಿ,ನೇರ ಲಾಭ ವರ್ಗಾವಣೆ (DBT),ಜನಧನ ಯೋಜನೆ ಮತ್ತು ಆಧಾರ್ ಮೂಲಕ 27 ಲ.ಕೋ.ರೂ.ಗಳಷ್ಟು ಕಲ್ಯಾಣ ಯೋಜನೆಗಳ ಲಾಭಗಳನ್ನು ನೇರವಾಗಿ ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ. ಡಿಬಿಟಿ ತಂತ್ರಜ್ಞಾನದ ಮೂಲಕ ಎರಡು ಲ.ಕೋ.ರೂ.ಗಳನ್ನು ಅನರ್ಹರ ಪಾಲಾಗದಂತೆ ರಕ್ಷಿಸಿದ್ದೇವೆ ಎಂದರು.

ಕಲ್ಯಾಣ ಕ್ರಮಗಳ ಶೇ.100ರಷ್ಟು ಲಾಭಗಳನ್ನು ಉದ್ದೇಶಿತ ಫಲಾನುಭವಿಗಳಿಗೆ ತಲುಪಿಸಲು ಸರಕಾರವು ಶ್ರಮಿಸುತ್ತಿದೆ ಎಂದ ಮೋದಿ,‘ಇದು ನಿಜವಾದ ಜಾತ್ಯತೀತತೆಯಾಗಿದೆ ಮತ್ತು ನಮ್ಮ ಸರಕಾರವು ಈ ದಾರಿಯಲ್ಲಿ ಮುನ್ನಡೆಯುತ್ತಿದೆ ’ ಎಂದು ಹೇಳಿದರು.

ಇದಕ್ಕೂ ಮುನ್ನ ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ ಖರ್ಗೆ(Mallikarjun Kharge)ಯವರು ತನ್ನ ಕೆಲವು ಹೇಳಿಕೆಗಳನ್ನು ಸಂಸತ್ತಿನ ದಾಖಲೆಗಳಿಂದ ಅಳಿಸುವ ರಾಜ್ಯಸಭೆಯ ಸಭಾಪತಿ ಜಗದೀಪ ಧನಕರ(Jagdeep Dhankhar) ಅವರ ನಿರ್ಧಾರಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿದರು. ತನ್ನ ಹೇಳಿಕೆಗಳನ್ನು ಅಳಿಸಲು ತನ್ನ ಭಾಷಣದಲ್ಲಿ ಯಾವುದೇ ಅಸಂಸದೀಯ ಅಥವಾ ದೋಷಾರೋಪಣೆಯ ಪದಗಳನ್ನು ತಾನು ಬಳಸಿರಲಿಲ್ಲ ಎಂದು ಅವರು ಧನಕರ ಅವರಿಗೆ ತಿಳಿಸಿದರು.

ಮಂಗಳವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi)ಯವರು ಲೋಕಸಭೆಯಲ್ಲಿ ಮಾಡಿದ್ದ ಭಾಷಣದಲ್ಲಿಯ ಅದಾನಿಯವರಿಗೆ ಸಂಬಂಧಿಸಿದ 18 ಹೇಳಿಕೆಗಳನ್ನೂ ದಾಖಲೆಗಳಿಂದ ಅಳಿಸಲಾಗಿತ್ತು.

Similar News