×
Ad

ನ್ಯಾಯಾಂಗ ನೇಮಕಾತಿಯಲ್ಲಿ ಮೀಸಲಾತಿಯಿಲ್ಲ: ಕೇಂದ್ರ ಸಚಿವ ರಿಜಿಜು

Update: 2023-02-09 22:23 IST

ಹೊಸದಿಲ್ಲಿ,ಫೆ.9: ಪ್ರಸಕ್ತ ಚಾಲ್ತಿಯಲ್ಲಿರುವ ಮೀಸಲಾತಿ ನೀತಿಯು ನ್ಯಾಯಾಂಗದ ನೇಮಕಾತಿಗಳಲ್ಲಿ ಮೀಸಲಾತಿಗೆ ಅವಕಾಶ ನೀಡುವುದಿಲ್ಲವೆಂದು ಕೇಂದ್ರ ಸರಕಾರವು ಗುರುವಾರ ಲೋಕಸಭೆಗೆ ತಿಳಿಸಿದೆ. ಆದರೆ ನ್ಯಾಯಾಧೀಶರುಗಳು ಅದರಲ್ಲೂ ವಿಶೇಷವಾಗಿ ಕೊಲೆಜಿಯಂ ಸದಸ್ಯರು ನ್ಯಾಯಾಧೀಶರ ನೇಮಕಾತಿಗಳಿಗೆ ಶಿಫಾರಸು ಮಾಡುವಾಗ ನ್ಯಾಯಾಂಗದಲ್ಲಿ ಸಮರ್ಪಕವಾಗಿ ಪ್ರಾತಿನಿಧ್ಯವನ್ನು ಹೊಂದಿರದ ಕೆಲವು ವರ್ಗಗಳನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ಅದು ಸಲಹೆ ನೀಡಿದೆ.

ರಾಜ್ಯಸಭಾ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಡಿಎಂಕೆ ಸಂಸದ ತಿರುಚಿ ಶಿವಾ(Tiruchi Siva) ಅವರು ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿ ಮೀಸಲಾತಿ ನೀತಿಯನ್ನು ಜಾರಿಗೊಳಿಸುವ ಸಾಧ್ಯತೆಯ ಬಗ್ಗೆ ಸರಕಾರವು ಪರಿಶೀಲಿಸುತ್ತಿದೆಯೇ ಎಂದು ಕೇಳಿದ್ದರು. ಅದಕ್ಕೆ ಉತ್ತರಿಸಿದ ಕೇಂದ್ರ ಕಾನೂನು ಹಾಗೂ ನ್ಯಾಯಾಂಗ ಸಚಿವ ಕಿರಣ್ ರಿಜಿಜು(Kiren Rijiju) ಅವರು, ಈಗ ಪ್ರಚಲಿತದಲ್ಲಿರುವ ನೀತಿ ಹಾಗೂ ನಿಯಮಗಳ ಪ್ರಕಾರ ಭಾರತೀಯ ನ್ಯಾಯಾಂಗದಲ್ಲಿ ಯಾವುದೇ ಮೀಸಲಾತಿಯಿಲ್ಲ’’ ಎಂದರು.

‘‘ಆದರೂ, ನ್ಯಾಯಾಂಗ ನೇಮಕಾತಿಗಳಿಗೆ ಹೆಸರುಗಳನ್ನು ಶಿಫಾರಸು ಮಾಡುವಾಗ ಹಿಂದುಳಿದ ಸಮುದಾಯಗಳು, ಮಹಿಳೆಯರು ಹಾಗೂ ಭಾರತೀಯ ನ್ಯಾಯಾಂಗದಲ್ಲಿ ಸಮರ್ಪಕವಾಗಿ ಪ್ರತಿನಿಧಿಸಲ್ಪಡದ ಇತರ ಶ್ರೇಣಿಗಳವರನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ನಾನು ಈಗಾಗಲೇ ಎಲ್ಲಾ ಗೌರವಾನ್ವಿತ ನ್ಯಾಯಾಧೀಶರುಗಳಿಗೆ ಅದರಲ್ಲಿಯೂ ವಿಶೇಷವಾಗಿ ಕೊಲೇಜಿಯಂ ಸದಸ್ಯರಿಗೆ ನೆನಪಿಸಿದ್ದೇನೆ’’ ಎಂದು ರಿಜಿಜು ಸದನಕ್ಕೆ ತಿಳಿಸಿದರು.

ಗುಜರಾತ್‌ನಲ್ಲಿ ವಿಚಾರಣೆಗೆ ಬಾಕಿಯಿರುವ ಪ್ರಕರಣಗಳ ಕುರಿತ ಪ್ರತ್ಯೇಕ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿದ ಕಾನೂನು ಹಾಗೂ ನ್ಯಾಯಾಂಗ ಖಾತೆಯ ಸಹಾಯಕ ಸಚಿವ ಎಸ್.ಪಿ.ಸಿಂಗ್ ಬಾಘೇಲ್ ಅವರು ಈವರೆಗೆ ಆ ರಾಜ್ಯದಲ್ಲಿ ಸುಮಾರು 14,47,459 ಪ್ರಕರಣಗಳು ವಿಚಾರಣೆಗೆ ಬಾಕಿಯಿರುವುದಾಗಿ ತಿಳಿಸಿದರು. ತಮ್ಮ ಪರವಾಗಿ ವಾದಿಸಲು ನ್ಯಾಯವಾದಿಗಳನ್ನು ನೇಮಿಸಲು ಶಕ್ತರಲ್ಲದವರಿಗೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್‌ಎಲ್‌ಎಸ್‌ಎ), ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (SLSA), ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA)ಗಳಿಂದ ಹಾಗೂ ತಾಲೂಕು ಮಟ್ಟದಲ್ಲಿ ಉಚಿತ ಕಾನೂನು ಸೇವೆಯನ್ನು ಒದಗಿಸಲಾಗುತ್ತದೆ ಎಂದರು.

Similar News