ಇಬ್ಬರು ಹೈಕೋರ್ಟ್ ನ್ಯಾಯಾಧೀಶರನ್ನು ಸುಪ್ರೀಂಕೋರ್ಟ್ ಗೆ ಪದೋನ್ನತಿ ನೀಡಲು ಕೇಂದ್ರ ಸರಕಾರ ಅನುಮೋದನೆ

Update: 2023-02-10 06:28 GMT

ಹೊಸದಿಲ್ಲಿ: ಸುಪ್ರೀಂಕೋರ್ಟ್‌ಗೆ ಐವರು ನ್ಯಾಯಾಧೀಶರನ್ನು ನೇಮಿಸಿದ ಒಂದು ವಾರದ ನಂತರ  ಕೇಂದ್ರ ಸರಕಾರವು ಇಂದು ಮತ್ತೆ ಇಬ್ಬರು ಹೈಕೋರ್ಟ್ ನ್ಯಾಯಾಧೀಶರನ್ನು ಸುಪ್ರೀಂಕೋರ್ಟ್‌ಗೆ ಪದೋನ್ನತಿ ನೀಡಲು ಅನುಮೋದನೆ ನೀಡಿದೆ.

ಪ್ರಸ್ತುತ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಹಾಗೂ   ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಿಸಲಾಗುವುದು.

"ಭಾರತದ ಸಂವಿಧಾನದ ಅಡಿಯಲ್ಲಿ ನಿಬಂಧನೆಗಳ ಪ್ರಕಾರ, ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಈ ಕೆಳಗಿನ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಿಸಿದ್ದಾರೆ. ಅವರಿಗೆ ನನ್ನ ಶುಭಹಾರೈಕೆ.

1. ರಾಜೇಶ್ ಬಿಂದಾಲ್, ಮುಖ್ಯ ನ್ಯಾಯಮೂರ್ತಿ, ಅಲಹಾಬಾದ್ ಹೈಕೋರ್ಟ್  

2. ಅರವಿಂದ್ ಕುಮಾರ್, ಮುಖ್ಯ ನ್ಯಾಯಮೂರ್ತಿ, ಗುಜರಾತ್ ಹೈಕೋರ್ಟ್" ಎಂದು ಕಾನೂನು ಸಚಿವ ಕಿರಣ್  ರಿಜಿಜು ಟ್ವೀಟ್ ಮಾಡಿದ್ದಾರೆ.

ರಾಜೇಶ್ ಬಿಂದಾಲ್ , ಅರವಿಂದ್ ಕುಮಾರ್  ಅವರ ಹೆಸರನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಜನವರಿ 31 ರಂದು ಶಿಫಾರಸು ಮಾಡಿತ್ತು. 

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಕೊಲಿಜಿಯಂ ಕಳೆದ ವರ್ಷ ಡಿಸೆಂಬರ್ 13 ರಂದು ಸುಪ್ರೀಂಕೋರ್ಟ್ ಗೆ ಪದೋನ್ನತಿ ನೀಡಲು  ಐದು ಹೆಸರುಗಳನ್ನು ಶಿಫಾರಸು ಮಾಡಿತ್ತು, ಆದರೆ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿ ಕಾರ್ಯಾಂಗ ಹಾಗೂ  ನ್ಯಾಯಾಂಗದ ನಡುವಿನ ಸುದೀರ್ಘ ಘರ್ಷಣೆ ನಡುವೆ ಸುಮಾರು ಎರಡು ತಿಂಗಳ ನಂತರ ಕೇಂದ್ರ ಸರಕಾರವು ಅನುಮೋದನೆ ನೀಡಿತ್ತು.

Similar News