×
Ad

ಹಳೆಯ ಬಜೆಟ್ ಓದಿ ಮುಜುಗರಕ್ಕೆ ಒಳಗಾದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್

ಇದು ಹಳೆಯ ಬಜೆಟ್ ಎಂದು ನೆನಪಿಸಿದ ಕಾಂಗ್ರೆಸ್ ಮುಖ್ಯ ಸಚೇತಕ ಮಹೇಶ್ ಜೋಶಿ

Update: 2023-02-10 12:37 IST

ಜೈಪುರ: ಹಣಕಾಸು ಸಚಿವರೂ ಆಗಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್(Ashok Gehlot ) ಶುಕ್ರವಾರ ವಿಧಾನಸಭೆಯಲ್ಲಿ ರಾಜ್ಯದ ಬಜೆಟ್ ಮಂಡಿಸಲು ಮುಂದಾದ ಸಂದರ್ಭದಲ್ಲಿ  ಹಳೆಯ ಬಜೆಟ್ ಓದುವ ಮೂಲಕ ಮುಜುಗರದ ಸನ್ನಿವೇಶ ಎದುರಿಸಿದರು.

ಕಾಂಗ್ರೆಸ್ ಸಚಿವ ಮಹೇಶ್ ಜೋಶಿ 'ಇದು ಹಳೆ ಬಜೆಟ್' ಎಂದು  ಹೇಳಿ ಬಜೆಟ್ ಓದುವುದನ್ನು ತಡೆದರು. ಬಜೆಟ್ ಓದಲಾರಂಭಿಸಿದ  ಗೆಹ್ಲೋಟ್ ಗೆ ಸತ್ಯಾಂಶ ಗೊತ್ತಾಗುವಾಗ ಹಲವು ನಿಮಿಷ ಕಳೆದಿತ್ತು.

ಸಿಎಂ ಅಶೋಕ್ ಗೆಹ್ಲೋಟ್ ಇಂದು ಹಳೆಯ ಬಜೆಟ್ ಮಂಡಿಸಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದರಿಂದ ರಾಜಸ್ಥಾನ ರಾಜ್ಯ ವಿಧಾನಸಭೆ ಕಲಾಪಕ್ಕೆ ಅಡ್ಡಿಯಾಯಿತು.

"ಈ ಬಜೆಟ್ ಮಂಡಿಸಲು ಸಾಧ್ಯವಿಲ್ಲ. ಸೋರಿಕೆಯಾಗಿದೆಯೇ?'' ಎಂದು ಬಿಜೆಪಿ ಮುಖಂಡ ಗುಲಾಬ್ ಚಂದ್ ಕಟಾರಿಯಾ ಪ್ರಶ್ನಿಸಿದರು.

ಗೆಹ್ಲೋಟ್ ಬಜೆಟ್  ಓದುತ್ತಿದ್ದಾಗ  ಕಳೆದ ವರ್ಷ ಜಾರಿಗೆ ತಂದ ಹಳೆಯ ಯೋಜನೆಗಳು ಹಾಗೂ ನಗರಾಭಿವೃದ್ಧಿ ಯೋಜನೆಗಳನ್ನು ಪ್ರಸ್ತಾಪಿಸಲು ಆರಂಭಿಸಿದರು. ಆಗ ಕಾಂಗ್ರೆಸ್ ನಾಯಕ, ಮುಖ್ಯ ಸಚೇತಕ  ಮಹೇಶ್ ಜೋಶಿ  ಅವರು ಬಜೆಟ್ ಓದುವುದನ್ನು ತಡೆದರು. ತಪ್ಪಿನ ಅರಿವಾಗಿ ಮುಖ್ಯಮಂತ್ರಿ ಗೆಹ್ಲೋಟ್ ಕ್ಷಮೆಯಾಚಿಸಿದರು.

ಪ್ರತಿ ಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದ ನಂತರ ಸದನದ ಕಲಾಪವನ್ನು 30 ನಿಮಿಷಗಳ ಕಾಲ ಮುಂದೂಡಲಾಯಿತು.

Similar News