ನೆಹರೂ ಉಪನಾಮ ಬಳಸಲು ಏಕೆ ಹೆದರುತ್ತೀರಿ?: ಗಾಂಧಿ ಕುಟುಂಬನ್ನು ಕುಟುಕಿದ ಪ್ರಧಾನಿ ಮೋದಿ

Update: 2023-02-10 09:30 GMT

ಹೊಸ ದಿಲ್ಲಿ: ಸುಮಾರು 600ಕ್ಕೂ ಹೆಚ್ಚು ಯೋಜನೆಗಳಿಗೆ ಗಾಂಧಿ ಹಾಗೂ ನೆಹರೂ ಹೆಸರುಗಳನ್ನು ಇಡಲಾಗಿದೆ. ಹೀಗಿದ್ದೂ, ಜಹರಲಾಲ್ ನೆಹರೂ ತಲೆಮಾರಿನವರು ನೆಹರೂ ಉಪನಾಮ ಬಳಸಲು ಏಕೆ ಹಿಂಜರಿಯುತ್ತಾರೆ ಎಂದು ಗುರುವಾರ ಪ್ರಧಾನಿ ನರೇಂದ್ರ ಮೋದಿ ಗಾಂಧಿ ಕುಟುಂಬವನ್ನು ಕುಟುಕಿದ್ದಾರೆ. ನಾನು ಈ ವರದಿಯನ್ನು ಪರಿಶೀಲಿಸಿಲ್ಲ ಎಂದು ಹೇಳಿ ಪತ್ರಿಕಾ ವರದಿಯೊಂದನ್ನು ಪ್ರದರ್ಶಿಸಿದ ಮೋದಿ, ಯಾವುದೇ ಸರ್ಕಾರ ದೇಶದ ಪ್ರಥಮ ಪ್ರಧಾನಿ ನೆಹರೂ ಅವರ ಹೆಸರನ್ನು ಸರ್ಕಾರಿ ಯೋಜನೆಗಳಿಗೆ ನಾಮಕರಣ ಮಾಡದಿದ್ದರೆ ಕಾಂಗ್ರೆಸ್ ಪಕ್ಷ ಹೇಗೆ ಪ್ರತಿಭಟಿಸುತ್ತಿತ್ತು ಎಂಬುದರತ್ತ ಬೊಟ್ಟು ಮಾಡಿದರು ಎಂದು hindustantimes.com ವರದಿ ಮಾಡಿದೆ.

ರಾಜ್ಯಸಭೆಯಲ್ಲಿ ವಂದನಾ ನಿರ್ಣಯದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಯಾವುದೇ ಕಾರಣಕ್ಕೆ ಸರ್ಕಾರಿ ಯೋಜನೆಗಳಿಗೆ ನೆಹರೂ ಹೆಸರು ನಾಮಕರಣ ಮಾಡದಿದ್ದರೆ ಕಾಂಗ್ರೆಸ್ ಪಕ್ಷವು ಪ್ರತಿಭಟಿಸುತ್ತಿತ್ತು. ಹೀಗಿದ್ದೂ, ನೆಹರೂ ತಲೆಮಾರು ಏಕೆ ಅವರ ಉಪನಾಮ ಬಳಸಲು ಹಿಂಜರಿಯುತ್ತಿದೆ? ಯಾವುದರ ಬಗ್ಗೆ ಅವರಿಗೆ ನಾಚಿಕೆಯಾಗುತ್ತಿದೆ?" ಎಂದು ಹೇಳಿದರು.

ಭಾರತವು ಒಂದು ನಿರ್ದಿಷ್ಟ ಕುಟುಂಬದ ಸ್ವತ್ತಲ್ಲ. ಈ ದೇಶವು ಅದರ ಸಾಮಾನ್ಯ ಜನರು ಹಾಗೂ ತಲೆಮಾರಿನ ಸಂಪ್ರದಾಯದ ಪ್ರಯತ್ನದಿಂದ ನಿರ್ಮಾಣವಾಗಿದೆ ಎಂದು ಕಿಡಿ ಕಾರಿದ ಅವರು, ರಾಜ್ಯಗಳ ಕಿರಕುಳದ ಆರೋಪವನ್ನು ಪ್ರಸ್ತಾಪಿಸಿ, ನನಗೆ ಒಕ್ಕೂಟ ವ್ಯವಸ್ಥೆಯ ಅರ್ಥ ತಿಳಿದಿದೆ ಮತ್ತು ಸರ್ಕಾರವು "ಸಹಕಾರಿ-ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆ"ಯನ್ನು ಎತ್ತಿ ಹಿಡಿದಿದೆ ಎಂದು ಸಮರ್ಥಿಸಿಕೊಂಡರು.

"ಇಷ್ಟು ಮಾತ್ರವಲ್ಲ; ಓರ್ವ ಪ್ರಧಾನಿಯು ಅರ್ಧ ಶತಮಾನದ ಕಾಲ 356ನೇ ವಿಧಿಯನ್ನು 50 ಬಾರಿ ಬಳಸಿದರು. ಅವರ ಹೆಸರು ಇಂದಿರಾ ಗಾಂಧಿ" ಎಂದೂ ಕಾಂಗ್ರೆಸ್ ಪಕ್ಷದ ಕಾಲೆಳೆದರು.

Similar News