ಭಾರತದಲ್ಲಿ ಬಿಬಿಸಿ ಚಾನೆಲ್ ನಿಷೇಧಿಸಬೇಕೆಂಬ ಹಿಂದೂ ಸೇನೆಯ ಮುಖ್ಯಸ್ಥನ ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್
ಹೊಸದಿಲ್ಲಿ: ಪ್ರಧಾನಿ ಮೋದಿ ಕುರಿತು ಸಾಕ್ಷ್ಯ ಚಿತ್ರ ರಚಿಸಿ ವಿವಾದಕ್ಕೆ ಒಳಗಾಗಿರುವ ಬಿಬಿಸಿ ಚಾನೆಲ್ ಕಾರ್ಯಾಚರಣೆಯನ್ನು ಭಾರತದಲ್ಲಿ ಸಂಪೂರ್ಣವಾಗಿ ನಿಷೇಧಿಸುವಂತೆ ಕೋರಿ ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ರಿಟನ್‌ನ ರಾಷ್ಟ್ರೀಯ ಬ್ರಾಡ್‌ಕಾಸ್ಟರ್ ಅನ್ನು ನಿಷೇಧಿಸುವಂತೆ ಕೋರಿ ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, “ಸಾಕ್ಷ್ಯಚಿತ್ರವು ದೇಶದ ಮೇಲೆ ಹೇಗೆ ಪರಿಣಾಮ ಬೀರುತ್ತದೆ” ಎಂದು ಪ್ರಶ್ನಿಸಿದೆ.
ಇದು "ಸಂಪೂರ್ಣವಾಗಿ ತಪ್ಪು ಕಲ್ಪನೆ" ಹಾಗೂ ಈ ಅರ್ಜಿಗೆ ಅರ್ಹತೆಗಳಿಲ್ಲ ಎಂದು ಬಣ್ಣಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿಂಕಿ ಆನಂದ್, ಬಿಬಿಸಿ ಉದ್ದೇಶಪೂರ್ವಕವಾಗಿ ಭಾರತದ ಪ್ರತಿಷ್ಠೆಗೆ ಧಕ್ಕೆ ತರುತ್ತಿದೆ ಎಂದು ವಾದಿಸಿದರು. ಸಾಕ್ಷ್ಯಚಿತ್ರದ ಹಿಂದಿನ ‘ಪಿತೂರಿ’ಯ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಎಂಎಂ ಸುಂದ್ರೇಶ್ ಅವರ ಪೀಠವು ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತು.