ನಾಯಕನಾಗಿ ಎಲ್ಲಾ ಮಾದರಿ ಕ್ರಿಕೆಟ್ ನಲ್ಲಿ ಶತಕ ದಾಖಲಿಸಿ ದಾಖಲೆ ಬರೆದ ರೋಹಿತ್ ಶರ್ಮಾ

Update: 2023-02-10 11:38 GMT

ಹೊಸದಿಲ್ಲಿ: ಭಾರತದ ನಾಯಕ ರೋಹಿತ್ ಶರ್ಮಾ ಎಲ್ಲಾ ಮಾದರಿ ಕ್ರಿಕೆಟ್ ನಲ್ಲಿ ಶತಕ ದಾಖಲಿಸಿದ ಮೊದಲ ಭಾರತೀಯ ನಾಯಕರೆಂಬ ಕೀರ್ತಿಗೆ ಭಾಜನರಾದರು.

ಶುಕ್ರವಾರ ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯ  ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 9ನೇ ಟೆಸ್ಟ್ ಶತಕವನ್ನು ಸಿಡಿಸುವ ಮೂಲಕ ರೋಹಿತ್ ಈ ಅಪರೂಪದ ದಾಖಲೆ ನಿರ್ಮಿಸಿದರು.

ರೋಹಿತ್ ನಾಯಕನಾಗಿ ತಾನಾಡಿದ  ಮೂರನೇ ಟೆಸ್ಟ್ ಪಂದ್ಯದಲ್ಲಿ ಶತಕವನ್ನು ಗಳಿಸಿದರು.  ಶ್ರೀಲಂಕಾದ ತಿಲಕರತ್ನೆ ದಿಲ್ಶನ್, ದಕ್ಷಿಣ ಆಫ್ರಿಕಾದ ಎಫ್ ಡು ಪ್ಲೆಸಿಸ್ ಹಾಗೂ  ಪಾಕಿಸ್ತಾನದ ಬಾಬರ್ ಆಝಂ ನಂತರ ಎಲ್ಲಾ 3 ಸ್ವರೂಪದ ಪಂದ್ಯಗಳಲ್ಲಿ ಶತಕ ದಾಖಲಿಸಿದ ವಿಶ್ವದ 4ನೇ ನಾಯಕರಾದರು.

ರೋಹಿತ್ 171 ಎಸೆತಗಳಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಶತಕ ಪೂರೈಸಿದರು. ಇಂಗ್ಲೆಂಡ್ ವಿರುದ್ಧ ಓವಲ್‌ನಲ್ಲಿ ಸೆಪ್ಟೆಂಬರ್ 2021 ರಲ್ಲಿ ರೋಹಿತ್ ಕೊನೆಯ ಬಾರಿಗೆ ಮೂರಂಕೆಯ  ಸ್ಕೋರ್ ದಾಖಲಿಸಿದ್ದರು, ಒಂದೂವರೆ ವರ್ಷಗಳ ನಂತರ ರೋಹಿತ್ ಶತಕ ಸಿಡಿಸಿದರು.

ಇದು ರೋಹಿತ್ ಆಸ್ಟ್ರೇಲಿಯ ವಿರುದ್ಧ ಗಳಿಸಿರುವ ಮೊದಲ ಟೆಸ್ಟ್ ಶತಕವಾಗಿದೆ. ಕೇವಲ 21 ಇನ್ನಿಂಗ್ಸ್‌ಗಳಲ್ಲಿ ಆರಂಭಿಕರಾಗಿ ಆರನೇ ಶತಕ ಸಿಡಿಸಿದರು. ಒಟ್ಟಾರೆಯಾಗಿ 35 ವರ್ಷ ವಯಸ್ಸಿನ ರೋಹಿತ್ ಒಟ್ಟು  ಒಂಬತ್ತು ಶತಕಗಳೊಂದಿಗೆ 3,000 ಕ್ಕೂ ಹೆಚ್ಚು ಟೆಸ್ಟ್ ರನ್ ಗಳಿಸಿದ್ದಾರೆ.

ಸೀಮಿತ ಓವರ್‌ಗಳ ಕ್ರಿಕೆಟ್ ನಲ್ಲಿ ಉತ್ತಮ ಓಪನರ್ ಆಗಿದ್ದ ರೋಹಿತ್ 2019 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಬಾರಿ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್  ಆರಂಭಿಸಿದ್ದರು. ವಿಶಾಖಪಟ್ಟಣಂನಲ್ಲಿ ಬೆನ್ನುಬೆನ್ನಿಗೆ ಶತಕಗಳನ್ನು ಗಳಿಸಿದ್ದರು.

ರೋಹಿತ್ ಮೊದಲ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (2019-21) ನಲ್ಲಿ  12 ಪಂದ್ಯಗಳಿಂದ 1, 094 ರನ್‌ಗಳೊಂದಿಗೆ ಆರಂಭಿಕರಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು.

Similar News