×
Ad

ಮೊದಲ ಟೆಸ್ಟ್: ಆಸ್ಟ್ರೇಲಿಯ ವಿರುದ್ಧ ಉತ್ತಮ ಮುನ್ನಡೆಯತ್ತ ಭಾರತ

ರೋಹಿತ್ ಶರ್ಮಾ ಶತಕ,ರವೀಂದ್ರ ಜಡೇಜ , ಅಕ್ಷರ್ ಪಟೇಲ್ ಅರ್ಧಶತಕ

Update: 2023-02-10 17:40 IST

 ನಾಗ್ಪುರ, ಫೆ.10: ನಾಯಕ ರೋಹಿತ್ ಶರ್ಮಾ ಶತಕ, ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜ ಹಾಗೂ ಅಕ್ಷರ್ ಪಟೇಲ್ ಅರ್ಧಶತಕಗಳ ಕೊಡುಗೆಯ ನೆರವಿನಿಂದ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಉತ್ತಮ ಮುನ್ನಡೆಯತ್ತ ಸಾಗುತ್ತಿದೆ.

2ನೇ ದಿನದಾಟವಾದ ಶುಕ್ರವಾರ 114 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿ 144 ರನ್ ಇನಿಂಗ್ಸ್ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯ ತನ್ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 177 ರನ್ ಗಳಿಸಿ ಆಲೌಟಾಗಿತ್ತು.

ರೋಹಿತ್ ಶರ್ಮಾ(120 ರನ್)9ನೇ ಶತಕ ಗಳಿಸಿ ಔಟಾದಾಗ ಭಾರತದ ಸ್ಕೋರ್ 6 ವಿಕೆಟ್ ನಷ್ಟಕ್ಕೆ 229 ರನ್. ವಿಕೆಟ್‌ಕೀಪರ್ ಭರತ್(8)ಚೊಚ್ಚಲ ಪಂದ್ಯದಲ್ಲಿ ಮಿಂಚಲಿಲ್ಲ. ಆಗ ಜೊತೆಯಾದ ರವೀಂದ್ರ ಜಡೇಜ(ಔಟಾಗದೆ 66 ರನ್, 170 ಎಸೆತ, 9 ಬೌಂಡರಿ) ಹಾಗೂ ಅಕ್ಷರ್ ಪಟೇಲ್(ಔಟಾಗದೆ 52 ರನ್,102 ಎಸೆತ, 8 ಬೌಂಡರಿ)8ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ ಅಮೂಲ್ಯ 81 ರನ್ ಸೇರಿಸಿ ತಂಡವನ್ನು ಉತ್ತಮ ಮುನ್ನಡೆಯನ್ನು ಒಯ್ದಿದ್ದಾರೆ.

ಆಸ್ಟ್ರೇಲಿಯ ಕೊನೆಯ ಅವಧಿಯ ಆಟದಲ್ಲಿ ಶತಕವೀರ ರೋಹಿತ್ ಹಾಗೂ ಭರತ್ ವಿಕೆಟನ್ನು 2ನೇ ಹೊಸ ಚೆಂಡಿನಲ್ಲಿ ಉರುಳಿಸಿತ್ತು. ಆದರೆ ಆ ನಂತರ ಎಡಗೈ ಆಲ್‌ರೌಂಡರ್‌ಗಳಾದ ಜಡೇಜ ಹಾಗೂ ಪಟೇಲ್ ನಿರಂತರವಾಗಿ ಬೌಂಡರಿ ಗಳಿಸಿ ಆಸೀಸ್ ಬೌಲರ್‌ಗಳನ್ನು ನಿರಾಸೆಗೊಳಿಸಿದರು. ಸದ್ಯ ಭಾರತವು ಚಾಲಕನ ಸೀಟಿನಲ್ಲಿದೆ.

ಚೊಚ್ಚಲ ಪಂದ್ಯವನ್ನಾಡಿದ ಸ್ಪಿನ್ನರ್ ಟಾಡ್ ಮುರ್ಫಿ(5-82)ಮೊದಲ ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ.

Similar News