ಸಾವಿಗಿಂತ ಎರಡು ವಾರ ಹಿಂದೆ ಕೋರ್ಟಿನಲ್ಲಿ ವಕೀಲರಿಂದ ಸುತ್ತುವರಿಯಲ್ಪಟ್ಟು ಬೆದರಿಕೆ ಎದುರಿಸಿದ್ದ ಎಹ್ತೆಶಾಮ್ ಹಶ್ಮಿ
ಹೊಸದಿಲ್ಲಿ: ಗುರುವಾರ ಹೃದಯಾಘಾತದಿಂದ ನಿಧನರಾದ ಸುಪ್ರೀಂ ಕೋರ್ಟ್ ವಕೀಲ ಹಾಗೂ ಖ್ಯಾತ ಸಾಮಾಜಿಕ ಹೋರಾಟಗಾರ ಎಹ್ತೆಶಾಮ್ ಹಶ್ಮಿ ಅವರು ಬಜರಂಗದಳ ನಾಯಕನೊಬ್ಬನ ಜಾಮೀನು ಅರ್ಜಿಯನ್ನು ವಿರೋಧಿಸುವವರ ಪರ ಹಾಜರಾಗುತ್ತಿದ್ದಾರೆಂದು ತಿಳಿದು ಜನವರಿ 28 ರಂದು ಇಂದೋರ್ ಜಿಲ್ಲಾ ನ್ಯಾಯಾಲಯದೊಳಗೆ ಸುಮಾರು 300 ವಕೀಲರು ಅವರನ್ನು ಸುತ್ತುವರಿದಿದ್ದರು ಎಂದು Newslaundry.com ವರದಿ ಮಾಡಿದೆ.
ಹಿಂದುತ್ವ ಪಡೆಗಳ ವಿರುದ್ಧದ ಕಾನೂನು ಹೋರಾಟದಲ್ಲಿ ಸಕ್ರಿಯರಾಗಿದ್ದ ಹಶ್ಮಿ ಅವರ ಸಾವು ಸಂಭವಿಸುವುದಕ್ಕಿಂತ ಎರಡು ವಾರಗಳ ಹಿಂದೆ ಕೋರ್ಟ್ ಆವರಣದೊಳಗೆ ಅವರನ್ನು ಬೆದರಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಬಜರಂಗದಳ ನಾಯಕ ತನು ಶರ್ಮ ಅವರ ಜಾಮೀನು ಅರ್ಜಿಯನ್ನು ವಿರೋಧಿಸಲು ದೂರುದಾರ ಮುಫ್ತಿ ಸಬೀರ್ ಆಲಿ ಪರ ಹಶ್ಮಿ ಹಾಜರಾಗಿದ್ದರು.
ಇಂದೋರ್‌ನಲ್ಲಿ ಜನವರಿ 25 ರಂದು ಪಠಾನ್ ಚಿತ್ರದ ವಿರುದ್ಧದ ಪ್ರತಿಭಟನೆ ವೇಳೆ ಪ್ರವಾದಿ ಮುಹಮ್ಮದ್ ಅವರ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಶರ್ಮಾನನ್ನು ಬಂಧಿಸಲಾಗಿತ್ತು.
ಇಂದೋರ್ ನ್ಯಾಯಾಲಯದಲ್ಲಿ ಅವರನ್ನು ವಕೀಲರು ಸುತ್ತುವರಿದ ನಂತರ ಮತ್ತು ಅವರು ಬೆದರಿಕೆ ಎದುರಿಸಿದ ನಂತರ ಹಶ್ಮಿ ಪೊಲೀಸ್ ರಕ್ಷಣೆಯಲ್ಲಿ ನ್ಯಾಯಾಲಯದ ಹೊರಗೆ ಕಾಲಿಟ್ಟಿದ್ದರು ಎಂದು ಹೆಸರು ಹೇಳಲಿಚ್ಛಿಸದ ವಕೀಲರೊಬ್ಬರು ಹೇಳಿದ್ಧಾರೆ.
ತಮಗೆ ಜನವರಿ 27 ರಂದೇ ಬೆದರಿಕೆಯೊಡ್ಡಲಾಗಿತ್ತಾದರೂ ಅದಕ್ಕೆ ಬಗ್ಗದೆ ಮರುದಿನ ವಾದ ಮಂಡನೆ ಮುಂದುವರಿಸಿದ್ದಾಗಿ ಈ ಹಿಂದೆ ಮಾಧ್ಯಮವೊಂದಕ್ಕೆ ಹಶ್ಮಿ ಹೇಳಿದ್ದರು.
ಮರುದಿನ ನ್ಯಾಯಾಲಯದಲ್ಲಿ ತನು ಶರ್ಮನನ್ನು ಬೆಂಬಲಿಸಿ ಹಲವಾರು ವಕೀಲರು ಬಂದಿದ್ದರು. ಅಲ್ಲಿಂದ ಹೊರಟುಹೋಗುವಂತೆ ನ್ಯಾಯಾಧೀಶರ ಸತತ ಸೂಚನೆ ಹೊರತಾಗಿಯೂ ಅವರು ಹೊರಹೋಗಿರಲಿಲ್ಲ ಎಂದು ತಿಳಿದು ಬಂದಿದೆ. ಈ ಘಟನೆ ಬಗ್ಗೆ ಮುನ್ಸೂಚನೆ ಪಡೆದಿದ್ದ ಹಶ್ಮಿ ಪೊಲೀಸ್ ರಕ್ಷಣೆ ಕೋರಿದ್ದರು ಹಾಗೂ ಅವರನ್ನು ಪೊಲೀಸರು ಸುರಕ್ಷಿತವಾಗಿ ಹೊರಗೊಯ್ದಿದ್ದರು ಎಂದು ಹಶ್ಮಿ ಅವರು ಈ ಹಿಂದೆ ನೆನಪಿಸಿಕೊಂಡಿದ್ದರು.
ಹಿಂದುತ್ವ ಕಾರ್ಯಕರ್ತರಿಂದ ಥಳಿತಕ್ಕೊಳಗಾಗಿದ್ದ ನಂತರ ಮಧ್ಯಪ್ರದೇಶ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಮುಸ್ಲಿಂ ಬಳೆ ಮಾರಾಟಗಾರನಿಗೆ ಜಾಮೀನು ಕೊಡಿಸಲೂ ಅವರು ನೆರವಾಗಿದ್ದರು.
ತ್ರಿಪುರಾ ಮತ್ತು ಉಜ್ಜಯನಿಯ ಮುಸ್ಲಿಂ-ವಿರೋಧಿ ಹಿಂಸಾಚಾರ ಕುರಿತ ಸತ್ಯಶೋಧನಾ ತಂಡಗಳ ಭಾಗವಾಗಿ ಹಶ್ಮಿ ಕೆಲಸ ಮಾಡಿದ್ದರು.