ಜಾಗತಿಕ ಹೂಡಿಕೆದಾರರ ಸಮ್ಮೇಳನಕ್ಕೆ ಅದಾನಿ ಗೈರು
ಹೊಸದಿಲ್ಲಿ, ಫೆ. 10: ಹಿಂಡನ್‌ಬರ್ಗ್ ರಿಸರ್ಚ್(Hindenburg Research) ವರದಿಯ ಬಳಿಕ ಅದಾನಿ ಗುಂಪಿ(Adani Group)ನ ಶೇರುಗಳ ಮೌಲ್ಯ ಪಾತಾಳಕ್ಕಿಳಿದಿರುವಂತೆಯೇ, ಲಕ್ನೋದಲ್ಲಿ ಶುಕ್ರವಾರ ನಡೆದ ಜಾಗತಿಕ ಹೂಡಿಕೆದಾರರ ಸಮ್ಮೇಳನಕ್ಕೆ ಅದಾನಿ ಗುಂಪಿನ ಸ್ಥಾಪಕ ಗೌತಮ್ ಅದಾನಿ(Gautam Adani) ಗೈರುಹಾಜರಾಗಿದ್ದಾರೆ.
ಮೂರು ದಿನಗಳ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ಉದ್ಘಾಟಿಸಿದರು. ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ (Yogi Adityanath)ಹಾಗೂ ಮುಕೇಶ್ ಅಂಬಾನಿ(Mukesh Ambani) ಮತ್ತು ಕುಮಾರ್ ಮಂಗಲಮ್ ಬಿರ್ಲಾ(Kumar Mangalam Birla) ಮುಂತಾದ ಪ್ರಮುಖ ಕೈಗಾರಿಕೋದ್ಯಮಿಗಳು ಸಮ್ಮೇಳನದಲ್ಲಿ ಉಪಸ್ಥಿತರಿದ್ದರು.
ಮೂಲಸೌಕರ್ಯ ಅಭಿವೃದ್ಧಿ ಮತ್ತು ಉದ್ಯಮಗಳಲ್ಲಿ ನೂರಾರು ಕೋಟಿ ಡಾಲರ್‌ಗಳನ್ನು ಹೂಡುವ ಭರವಸೆಯನ್ನು ಸಮ್ಮೇಳನದಲ್ಲಿ ಭಾಗವಹಿಸಿರುವ ಉದ್ಯಮಿಗಳು ನೀಡಿದ್ದಾರೆ.
ಸುಮಾರು 60,000-70,000 ಕೋಟಿ ರೂಪಾಯಿಯನ್ನು ಹೂಡುವ ಭರವಸೆಯನ್ನು ಅದಾನಿ ಗುಂಪು ನೀಡಿದೆ ಎಂದು ರಾಜ್ಯದ ಮೂಲಸೌಕರ್ಯ ಮತ್ತು ಕೈಗಾರಿಕೆಗಳ ಸಚಿವ ನಂದ ಗೋಪಾಲ ಗುಪ್ತ ನಂದಿ ಹೇಳಿದರು. ಅದಾನಿ ಗುಂಪಿನ ಪರವಾಗಿ ಯಾರು ಬರುತ್ತಾರೆ ಎನ್ನುವುದು ಇನ್ನಷ್ಟೇ ತಿಳಿದುಬರಬೇಕಾಗಿದೆ.