×
Ad

'ಒಂದು ಹೆಜ್ಜೆ ಮುಂದೆ, ಒಂದು ಹೆಜ್ಜೆ ಬಲಶಾಲಿ': ಚೇತರಿಸಿಕೊಂಡು ನಡೆದಾಡುವ ಫೋಟೊ ಹಂಚಿಕೊಂಡ ರಿಷಭ್ ಪಂತ್

Update: 2023-02-11 10:25 IST

ಹೊಸದಿಲ್ಲಿ, ಫೆ.11: ಕಳೆದ ವರ್ಷ ಡಿಸೆಂಬರ್‌ನಲ್ಲಿ ಭೀಕರ ಕಾರು ಅಪಘಾತದಿಂದ ಪವಾಡ ಸದೃಶವಾಗಿ ಪಾರಾಗಿ ಸದ್ಯ ಚೇತರಿಕೆಯ ಹಂತದಲ್ಲಿರುವ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್(Rishabh Pant) ನಡೆದಾಡಲು ಆರಂಭಿಸಿದ್ದಾರೆ.

ಈ ಕುರಿತು ಸ್ವತಃ ಟ್ವೀಟ್ ಮಾಡಿರುವ ಪಂತ್ ಅವರು ತಾವು ಚೇತರಿಸಿಕೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. "ಒಂದು ಹೆಜ್ಜೆ ಮುಂದೆ, ಒಂದು ಹೆಜ್ಜೆ ಬಲಶಾಲಿ, ಒಂದು ಹೆಜ್ಜೆ ಉತ್ತಮ" ಎಂಬ  ಸ್ಪೂರ್ತಿದಾಯಕ ಸಂದೇಶವನ್ನು ಬರೆದುಕೊಂಡಿದ್ದಾರೆ.

ಪಂತ್‌  ಚಿತ್ರಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಭಾರತೀಯ ಕ್ರಿಕೆಟ್ ಸಮುದಾಯಕ್ಕೆ ಇದು  ಭಾರೀ  ನಿಟ್ಟುಸಿರು ತಂದಿದೆ.

ಚಿತ್ರಗಳಲ್ಲಿ, ಪಂತ್ ಊರುಗೋಲುಗಳ ಸಹಾಯದಿಂದ ನಿಂತಿರುವ ಹಾಗೂ  ಸ್ಥಿರವಾಗಿ ನಡೆಯುವುದು ಕಂಡುಬಂದಿದೆ.

2022ರ ಡಿ.30ರಂದು ದಿಲ್ಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ತಮ್ಮ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಹೊಸ ವರ್ಷಾಚರಣೆಗಾಗಿ ಪಂತ್ ಪ್ರಯಾಣಿಸುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿತ್ತು.  ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು. ಪಂತ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.

ಪಂತ್ ಅವರ ತಲೆ, ಬೆನ್ನು, ಮಂಡಿ ಕಾಲಿಗೆ ಗಾಯವಾಗಿದ್ದವು. ಜನವರಿಯಲ್ಲಿ ಮುಂಬೈ ಆಸ್ಪತ್ರೆಯಲ್ಲಿ ಬಲಗಾಲಿನ ಮಂಡಿಯ ಅಸ್ಥಿರಜ್ಜು ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಇದರಿಂದ  ಚೇತರಿಸಿಕೊಳ್ಳಲು ಹಲವು ತಿಂಗಳುಗಳು ಬೇಕಾಗುತ್ತದೆ.

Similar News