ಸದ್ಯ ಅದಾನಿ ಸಮೂಹದಲ್ಲಿ ಮತ್ತಷ್ಟು ಬಂಡವಾಳ ಹೂಡಿಕೆ ಮಾಡುವ ಇರಾದೆ ಇಲ್ಲ: LIC ಸ್ಪಷ್ಟನೆ

Update: 2023-02-11 08:44 GMT

ಹೊಸ ದಿಲ್ಲಿ: ಸದ್ಯ ಅದಾನಿ ಸಮೂಹದ ಶೇರುಗಳು ಗಮನಾರ್ಹ ಅಗ್ಗದ ಬೆಲೆಗೆ ದೊರೆಯುತ್ತಿದ್ದರೂ, ತಕ್ಷಣವೇ ಅದರಲ್ಲಿ ಹೂಡಿಕೆ ಮಾಡುವ ಯಾವ ಇರಾದೆಯೂ ತನಗಿಲ್ಲ ಎಂದು ಭಾರತೀಯ ಜೀವ ವಿಮಾ ನಿಗಮ ಸ್ಪಷ್ಟಪಡಿಸಿದೆ ಎಂದು moneycontrol.com  ವರದಿ ಮಾಡಿದೆ.

ಭಾರತದ ಬಹು ದೊಡ್ಡ ಸಾಂಸ್ಥಿಕ ಹೂಡಿಕೆದಾರ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮವು ಅದಾನಿ ಎಂಟರ್‌ಪ್ರೈಸಸ್‌ನ ಎಫ್‌ಪಿಒ ಚಂದಾದಾರಿಕೆ ಖರೀದಿಸಲು ದುಬಾರಿ ದರಕ್ಕೆ ನಮೂದಿಸಿಕೊಂಡಿತ್ತು. ಅದೀಗ ಶೇ. 40ರಷ್ಟು ಅಗ್ಗವಾಗಿದೆ.

ಈ ಕುರಿತು CNBC-TV18  ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಭಾರತೀಯ ಜೀವ ವಿಮಾ ನಿಗಮದ ಅಧ್ಯಕ್ಷ ಎಂ.ಆರ್.ಕುಮಾರ್, "ನಾವೀಗ ಏನನ್ನೂ ಮಾಡಲು ಯೋಚಿಸುತ್ತಿಲ್ಲ" ಎಂದು ಹೇಳಿದ್ದಾರೆ.

ಜೀವ ವಿಮಾ ವಲಯದ ದೈತ್ಯ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮವು, ಅದಾನಿ ಶೇರುಗಳು ಅತ್ಯಂತ ಕಡಿಮೆ ಅವಧಿಯಲ್ಲಿ ಕುಸಿತ ಕಂಡಿವೆ. ಈ ಹಂತದಲ್ಲಿ ಅದಾನಿ ಸಮೂಹದ ಶೇರುಗಳಿಂದ ಹೂಡಿಕೆಯನ್ನು ಹಿಂಪಡೆಯುವುದಾಗಲಿ ಅಥವಾ ಈ ಕುರಿತು ಅಗತ್ಯವಿರುವ ಇನ್ನಾವುದೇ ಕ್ರಮವನ್ನು ಕೈಗೊಳ್ಳುವುದಾಗಲಿ ಈ ಹಂತದಲ್ಲಿ ಸೂಕ್ತವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

"ಹೂಡಿಕೆಯನ್ನು ಹಿಂಪಡೆಯುವ ನಿರ್ಣಯ ಕೈಗೊಳ್ಳಲು ಇದು ತೀರಾ ಸಣ್ಣ ಅವಧಿಯಾಗಿದೆ" ಎಂದು ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಅದಾನಿ ಶೇರು ಮೌಲ್ಯದ ಅಸ್ಥಿರತೆ ಮತ್ತು ಕಳಪೆ ಮಾರುಕಟ್ಟೆ ನಿರ್ವಹಣೆಯಿಂದ ಭಾರತೀಯ ಜೀವ ವಿಮಾ ನಿಗಮದ ಶೇರು ಮೌಲ್ಯಗಳ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.

ಸಂಸತ್ತಿನಲ್ಲಿ ಸರ್ಕಾರ ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ, ಕಳೆದ ಹಲವಾರು ವರ್ಷಗಳಿಂದ ಭಾರತೀಯ ಜೀವ ವಿಮಾ ನಿಗಮವು ಒಟ್ಟು ರೂ. 30,127 ಕೋಟಿಯನ್ನು ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿದೆ. ಇಲ್ಲಿಯವರೆಗೆ ಈ ಹೂಡಿಕೆಯು ಸಕಾರಾತ್ಮಕ ಲಾಭ ತಂದು ಕೊಟ್ಟಿದೆ.

Similar News