ಕೃಷಿ, ಕೃಷಿಕರ ಉಳಿವಿಗೆ ಸಂಘಟನೆಯ ಪಾತ್ರ ದೊಡ್ಡದು: ಜಿಲ್ಲಾ ರೈತ ಸಮ್ಮೇಳನದಲ್ಲಿ ಡಾ.ಎಂ.ಎನ್.ರಾಜೇಂದ್ರಕುಮಾರ್

Update: 2023-02-11 15:23 GMT

ಉಚ್ಚಿಲ: ಜಿಲ್ಲೆಯಲ್ಲಿ ಕೃಷಿ ಸಂಕಷ್ಟದಲ್ಲಿದೆ. ಹಲವು ಕಾರಣಗಳಿಂದ  ಕೃಷಿಕರು ಕೃಷಿ ಭೂಮಿಯನ್ನು ಹಡಿಲು ಬಿಡುತಿದ್ದಾರೆ. ಹೊಸ ತಂತ್ರಜ್ಞಾನ ಗಳನ್ನು ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ  ಸಂಘಟನೆಗಳ ಪಾತ್ರ ಬಹಳ ದೊಡ್ಡದು. ಈ ದಿಶೆಯಲ್ಲಿ ಭಾರತೀಯ ಕಿಸಾನ್ ಸಂಘ ರೈತರನ್ನು ಸಂಘಟಿಸಿ ರೈತ ಸಮಾವೇಶ ನಡೆಸಿರುವುದು ಶ್ಲಾಘನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ. ಎನ್.ರಾಜೇಂದ್ರಕುಮಾರ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ರೈತ ಸಮ್ಮೇಳನವನ್ನು ಉದ್ಘಾಟಿಸಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯ ಅಧ್ಯಕ್ಷರೂ ಆದ ಡಾ.ಎಂ.ಎನ್. ರಾಜೇಂದ್ರ ಕುಮಾರ್  ಮಾತನಾಡುತ್ತಿದ್ದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ವಿ.ಸುನೀಲ್‌ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಭಾಕಿಸಂ ರೈತರನ್ನು ಸಂಘಟಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರಕಾರ, ಇಲಾಖೆ ಮತ್ತು ರೈತರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಅಧಿಕಾರಿಗಳೊಂದಿಗೆ, ಇಲಾಖೆಯೊಂದಿಗೆ ಸಮಾಲೋಚಿಸಿ, ರೈತ ಪರ ತೀರ್ಮಾನಗಳನ್ನು ತರುವಲ್ಲಿ ಕಾರ್ಯೋನ್ಮುಖ ವಾಗಿದೆ ಎಂದರು.

ಸಾಮಾಜಿಕ ಚಿಂತಕ ಜಿ.ವಾಸುದೇವ ಭಟ್‌ದಿಕ್ಸೂಚಿ ಭಾಷಣ ಮಾಡಿದರು. ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರೀತ ಶೆಟ್ಟಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಸೀತಾರಾಮ ಗಾಣಿಗ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.

ಭಾರತೀಯ ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಆಲ್ಸೆ, ಶ್ರೀನಿವಾಸ ಭಟ್, ಕೋಶಾಧಿಕಾರಿ ವಾಸುದೇವ ಶ್ಯಾನುಭಾಗ್, ಮಹಿಳಾ ಪ್ರಮುಖರಾದ ನಿರ್ಮಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಿಲ್ಲಾ ಕಾರ್ಯಕ್ರಮಗಳ ವರದಿ ಮಂಡಿಸಿದರು. ಚಂದ್ರಹಾಸ ಶೆಟ್ಟ ಇನ್ನಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಬಳಿಕ ಕೃಷಿ ಕುರಿತು ವಿಚಾರಗೋಷ್ಠಿ ನಡೆಯಿತು. ಇದರಲ್ಲಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಧನಂಜಯ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ ವಿಚಾರ ಮಂಡನೆ ಮಾಡಿದರು.

ಸಮರೋಪ ಸಮಾರಂಭದಲ್ಲಿ ಪ್ರಗತಿಪರ ಕೃಷಿಕ ಚಂದ್ರಕಾಂತ್ ರಾವ್ ಇನ್ನಾ ಸಮಾರೋಪ ಭಾಷಣ ಮಾಡಿದರು. ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಭಟ್ ಸಮ್ಮೇಳನದ ನಿರ್ಣಯಗಳನ್ನು ಮಂಡಿಸಿದರು. ಭಾಕಿಸಂನ ನವೀನ ಚಂದ್ರ ಜೈನ್, ಮಹಾಬಲ ಬಾಯಾರಿ ಆಲೂರು, ಸುಂದರ ಶೆಟ್ಟಿ ಮುನಿ ಯಾಲು, ಅನಂತಪದ್ಮನಾಭ ಉಡುಪ, ಮೋಹನದಾಸ ಅಡ್ಯಂತಾಯ ಉಪಸ್ಥಿತರಿದ್ದರು. ಸತ್ಯನಾರಾಯಣ ಉಡುಪ ವಂದಿಸಿ ದೀಪಕ್ ಪೈ ಪಲಿಮಾರು ಕಾರ್ಯಕ್ರಮ ನಿರ್ವಹಿಸಿದರು.

Similar News