ಕೋವಿಂದ್‌ ರಾಷ್ಟ್ರಪತಿಯಾಗಿದ್ದಾಗ ಕೇಂದ್ರ ಸರಕಾರದ ನಿರ್ಧಾರವನ್ನು ಮರಳಿಸಿದ ಬಗ್ಗೆ ದಾಖಲೆಯೇ ಇಲ್ಲ !

Update: 2023-02-12 14:34 GMT

ಹೊಸದಿಲ್ಲಿ: ಕೇಂದ್ರ ಸಚಿವ ಸಂಪುಟದಿಂದ ಮರುಪರಿಶೀಲನೆಗೆ ತೆಗೆದುಕೊಂಡ ಯಾವುದೇ ನಿರ್ಧಾರವನ್ನು ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಹಿಂತಿರುಗಿಸಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ರಾಷ್ಟ್ರಪತಿ ಭವನ ಹೇಳಿದೆ.

  ಕೇಂದ್ರ ಸಚಿವ ಸಂಪುಟದ ಎಷ್ಟು ನಿರ್ಧಾರಗಳನ್ನು ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮರುಪರಿಶೀಲನೆಗೆ ಹಿಂದಿರುಗಿಸಿದ್ದಾರೆ ಎಂದು ಚೆನ್ನೈ ಮೂಲದ ಕಾಲೇಜು ವಿದ್ಯಾರ್ಥಿಯೊಬ್ಬರು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಪ್ರಶ್ನೆ ಕೇಳಿದ್ದಾರೆ. ಈ ಬಗ್ಗೆ ರಾಷ್ಟ್ರಪತಿ ಭವನ ಉತ್ತರ ನೀಡಿದ್ದು, ರಾಮನಾಥ್ ಕೋವಿಂದ್ ಅವರು ಯಾವುದೇ ನಿರ್ಧಾರವನ್ನು ಹಿಂದಿರುಗಿಸಿದ ಬಗ್ಗೆ ಯಾವುದೇ ಡೇಟಾ ಅಥವಾ ಮಾಹಿತಿ ಲಭ್ಯವಿಲ್ಲ ಎಂದು ಹೇಳಿದೆ.

  ರಾಷ್ಟ್ರಪತಿ ಭವನದ ಉತ್ತರದಿಂದ ತೃಪ್ತರಾಗದ ಆರ್‌ಟಿಐ ಅರ್ಜಿದಾರ ಯುವನ್ ಮಿತ್ರನ್ ಅವರು ಇದೀಗ ರಾಷ್ಟ್ರಪತಿ ಭವನದ ಮೊದಲ ಮೇಲ್ಮನವಿ ಪ್ರಾಧಿಕಾರ (ಎಫ್‌ಎಎ) ಮುಂದೆ ಮೇಲ್ಮನವಿ ಸಲ್ಲಿಸಿದ್ದಾರೆ. ಕೇಂದ್ರ ಸಚಿವ ಸಂಪುಟದ ಯಾವುದೇ ನಿರ್ಧಾರವನ್ನು ಮಾಜಿ ರಾಷ್ಟ್ರಪತಿಗಳು ಮರುಪರಿಶೀಲನೆಗೆ ಹಿಂತಿರುಗಿಸಿಲ್ಲ ಎಂಬುದರ ಬಗ್ಗೆ ಅರ್ಜಿದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಪತಿ ಭವನದಿಂದ ಬಂದಿರುವ ಮಾಹಿತಿಯು ಅಪೂರ್ಣ, ದಾರಿತಪ್ಪಿಸುವ ಮತ್ತು ತಪ್ಪಾದ ಮಾಹಿತಿ ಎಂದು ಯುವನ್ ಮಿತ್ರನ್ ಹೇಳಿದ್ದಾರೆ. ಮಿತ್ರನ್ ಅವರ ಎರಡನೇ ಮೇಲ್ಮನವಿಯನ್ನು, ಎಫ್‌ಎಎಯ ವಿಶೇಷ ಕರ್ತವ್ಯ ಅಧಿಕಾರಿಯು ಸಂಬಂಧಿಸಿದ ಇಲಾಖೆಗೆ ರವಾನಿಸಿದ್ದು, ಅಲ್ಲಿಂದಲೂ ಮತ್ತೆ ಅದೇ ಉತ್ತರವು ಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿಯ ಕ್ರಿಮಿನಾಲಜಿ ಪ್ರಾಧ್ಯಾಪಕ ರಾಜ್ ಕಪಿಲ್, 'ನಮ್ಮ ಪ್ರಕಾರ, ರಾಷ್ಟ್ರಪತಿಗಳ ಭವನವು ನಮ್ಮ ಆರ್‌ಟಿಐ ಪ್ರಶ್ನೆಗೆ ಸ್ಪಷ್ಟ ಮತ್ತು ತೃಪ್ತಿಕರ ಉತ್ತರವನ್ನು ನೀಡುವುದನ್ನು ತಡೆಯುತ್ತಿದೆ ಎಂದು ನಾವು ಭಾವಿಸುತ್ತೇವೆ' ಎಂದು ಹೇಳಿದ್ದಾರೆ.

ಆರ್‌ಟಿಐ ಅರ್ಜಿ ಮತ್ತು ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿ ಯುವನ್ ಮಿತ್ರನ್‌ಗೆ ರಾಜ್ ಕಪಿಲ್ ಸಹಾಯ ಮಾಡಿದ್ದಾರೆ.

ರಾಜ್ ಕಪಿಲ್, 'ಅಂತಹ ಯಾವುದೇ ಮಾಹಿತಿ ಲಭ್ಯವಾಗದಿರುವುದು... ಸಾಕಷ್ಟು ಆಘಾತಕಾರಿಯಾಗಿದೆ' ಎಂದು ಹೇಳಿದ್ದಾರೆ. ಆರ್‌ಟಿಐ ಮತ್ತು ಮೇಲ್ಮನವಿಯಲ್ಲಿ ಪಡೆದ ಉತ್ತರವು ಮಾಜಿ ರಾಷ್ಟ್ರಪತಿಗಳ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ ಎಂದು ಅವರು ಹೇಳಿದರು.

Similar News