ಗೃಹ ಸಚಿವ ಅಮಿತ್‌ ಶಾ ರಿಂದ 'ಕೇರಳ ವಿರೋಧಿ' ಭಾಷಣ: ದೇಶದ್ರೋಹ, ತುಕ್ಡೆಗ್ಯಾಂಗ್‌ ಎಂದ ನೆಟ್ಟಿಗರು.!

Update: 2023-02-12 17:03 GMT

ಮಂಗಳೂರು: ಕೇಂದ್ರ ಗೃಹ ಅಮಿತ್‌ ಶಾ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಾಡಿದ ಭಾಷಣ ಭಾರೀ ಚರ್ಚೆಗೆ ಕಾರಣವಾಗಿದೆ. ಕ್ಯಾಂಪ್ಕೊ ಸುವರ್ಣ ಮಹೋತ್ಸವವನ್ನು ಆಚರಿಸಲು ಪುತ್ತೂರಿಗೆ ಬಂದಿದ್ದ ಅಮಿತ್‌ ಶಾ, ಕೇರಳದ ವಿರುದ್ಧ ಪೂರ್ವಾಗ್ರಹ ಪೀಡಿತರಾಗಿ ಭಾಷಣ ಮಾಡಿದ್ದಾರೆಂದು ಅಸಮಾಧಾನ ವ್ಯಕ್ತವಾಗಿದೆ. ಒಕ್ಕೂಟ ಸರ್ಕಾರದ ಗೃಹ ಸಚಿವರಾಗಿ ಹೀಗೆ ಒಂದು ರಾಜ್ಯದ ವಿರುದ್ಧ ಧ್ವೇಷ ಹುಟ್ಟುವಂತೆ ಭಾಷಣ ಮಾಡುವುದು ಸರಿಯೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕರ್ನಾಟಕದ ಬಿಜೆಪಿ ಸರ್ಕಾರವನ್ನು ಹಾಗೂ ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಅಮಿತ್‌ ಶಾ, “ದೇಶದಲ್ಲಿ ಭಯೋತ್ಪಾದನೆ ಮತ್ತು ನಕ್ಸಲ್ ನಿರ್ಮೂಲನೆ ಮಾಡುವ ಮೂಲಕ ಪ್ರಧಾನಿ ದೇಶವನ್ನು ಸುರಕ್ಷಿತವಾಗಿಟ್ಟಿದ್ದಾರೆ. ನಿಮ್ಮ ಪಕ್ಕದಲ್ಲಿ ಕೇರಳ ರಾಜ್ಯವಿದೆ. ನಾನು ಹೆಚ್ಚು ಹೇಳಲು ಹೋಗುವುದಿಲ್ಲ. ಮೋದಿ ನಾಯಕತ್ವದಲ್ಲಿ ಬಿಜೆಪಿ ಮಾತ್ರ ದೇಶದ್ರೋಹಿಗಳಿಂದ ಕರ್ನಾಟಕವನ್ನು ರಕ್ಷಿಸಲು ಸಾಧ್ಯ. ದೇಶವಿರೋಧಿ ಶಕ್ತಿಗಳನ್ನು ಸಮಾಧಾನಪಡಿಸುವ ಈ ಕಾಂಗ್ರೆಸ್‌ನಿಂದ ಕರ್ನಾಟಕವನ್ನು ರಕ್ಷಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.  
 
ಆ ಮೂಲಕ, ಕೇರಳದಲ್ಲಿ ದೇಶದ್ರೋಹ ಮತ್ತು ನಕ್ಸಲ್‌ ವಾದ ವಿಚಾರದಲ್ಲಿ ಪೂರ್ವಾಗ್ರಹ ಹರಡುವಂತೆ ಅಮಿತ್‌ ಶಾ ಭಾಷಣ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
 
“ಕೇರಳದಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಿಲ್ಲವೆಂದು, ಕೇಂದ್ರ ಸಚಿವರು ಎರಡು ರಾಜ್ಯಗಳ ನಡುವೆ ದ್ವೇಷ ಬಿತ್ತಲು ಸಾಧ್ಯವೇ??? ತುಕ್ಡೆ ಗ್ಯಾಂಗ್ ಯಾರು ???” ಎಂದು ಮಿನಿ ನಾಯರ್‌ ಎಂಬವರು ಪ್ರಶ್ನಿಸಿದ್ದಾರೆ. 

ದೇಶದ ಗೃಹ ಸಚಿವರು ಒಂದು ರಾಜ್ಯ ಮತ್ತು ಅದರ ಜನರ ವಿರುದ್ಧ ಬಹಿರಂಗವಾಗಿ ದ್ವೇಷವನ್ನು ಉಗುಳುತ್ತಿದ್ದಾರೆ. ಇದು ದೇಶವಿರೋಧಿ ಅಲ್ಲವೇ?” ಎಂದು ಮತ್ತೊಬ್ಬ ಟ್ವಿಟರ್‌ ಬಳಕೆದಾರರು ಟ್ವೀಟ್‌ ಮಾಡಿದ್ದಾರೆ. 

ಪ್ರಾದೇಶಿಕ ಧ್ವೇಷವನ್ನು ಹರಡುವವರು ಯಾರು?: ತೇಜಸ್ವಿ ಸೂರ್ಯಗೆ ಪ್ರಶ್ನೆ

ಅಮಿತ್‌ ಶಾ ಭಾಷಣದ ವರದಿ ಬಿತ್ತರವಾಗುತ್ತಿದ್ದಂತೆ, ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಹಿಂದೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ರಾಹುಲ್‌ ಗಾಂಧಿ ವಿರುದ್ಧ ಮಾಡಿದ್ದ ಟ್ವೀಟ್‌ ಮತ್ತೆ ಮುನ್ನೆಲೆಗೆ ಬಂದಿದೆ. 

ಮಹರಾಷ್ಟ್ರದ ಯೋಜನೆ ಗುಜರಾತಿಗೆ ಹೋಗುತ್ತಿದೆ, ಯಾಕೆಂದರೆ ಅಲ್ಲಿ ಬಿಜೆಪಿಗೆ ಚುನಾವಣೆ ಎದುರಿಸಬೇಕಿದೆ ಎಂದು ಹೇಳಿದ್ದ ರಾಹುಲ್‌ ಗಾಂಧಿಯ ಹೇಳಿಕೆಯನ್ನಿಟ್ಟು, ತೇಜಸ್ವಿ ಸೂರ್ಯ ಅವರು ರಾಹುಲ್‌ ವಿರುದ್ಧ ಹರಿಹಾಯ್ದಿದ್ದರು. ರಾಹುಲ್‌ ಗಾಂಧಿ ಒಂದು ರಾಜ್ಯದ ವಿರುದ್ಧ ಮತ್ತೊಂದು ರಾಜ್ಯವನ್ನು ಬಹಿರಂಗವಾಗಿ ಎತ್ತಿಕಟ್ಟುತ್ತಿದ್ದಾರೆ ಮತ್ತು ಪ್ರಾದೇಶಿಕ ದ್ವೇಷವನ್ನು ಹರಡುತ್ತಿದ್ದಾರೆ ಎಂದು ಸೂರ್ಯ ಆರೋಪಿಸಿದ್ದರು. 

ಅಮಿತ್‌ ಶಾ ಕೇರಳ ವಿರೋಧಿ ಹೇಳಿಕೆಯನ್ನು ಉಲ್ಲೇಖಿಸಿರುವ ಪತ್ರಕರ್ತ ಮಹಮ್ಮದ್‌ ಝುಬೈರ್‌, ತೇಜಸ್ವಿ ಸೂರ್ಯ ಅವರೇ , ಯಾರು ಒಂದು ರಾಜ್ಯದ ವಿರುದ್ಧ ಮತ್ತೊಂದು ರಾಜ್ಯವನ್ನು ಬಹಿರಂಗವಾಗಿ ಎತ್ತಿಕಟ್ಟುತ್ತಿದ್ದಾರೆ ಮತ್ತು ಪ್ರಾದೇಶಿಕ ದ್ವೇಷವನ್ನು ಹರಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಇದನ್ನುಓದಿ: ಕೋವಿಂದ್‌ ರಾಷ್ಟ್ರಪತಿಯಾಗಿದ್ದಾಗ ಕೇಂದ್ರ ಸರಕಾರದ ನಿರ್ಧಾರವನ್ನು ಮರಳಿಸಿದ ಬಗ್ಗೆ ದಾಖಲೆಯೇ ಇಲ್ಲ !

Similar News