ಪರವಾನಿಗೆ ಇಲ್ಲದೆ ಔಷಧ ಮಾರಾಟ: ಅಮೆಝಾನ್, ಪ್ಲಿಪ್‌ಕಾರ್ಟ್‌ ಗೆ ಡಿಜಿಸಿಐ ನೋಟಿಸ್

Update: 2023-02-13 14:50 GMT

ಹೊಸದಿಲ್ಲಿ, ಫೆ. 13:  ಪರವಾನಿಗೆ ಇಲ್ಲದೆ ಆನ್‌ಲೈನ್‌ನಲ್ಲಿ ಔಷಧ ಮಾರಾಟ ಮಾಡುತ್ತಿರುವ ಆರೋಪಕ್ಕೆ ಸಂಬಂಧಿಸಿ ಅಮೆಝಾನ್ (Amazon) ಹಾಗೂ ಫ್ಲಿಪ್ ಕಾರ್ಟ್ ಹೆಲ್ತ್ ಪ್ಲಸ್ (Flipkart Health Plus) ಸೇರಿದಂತೆ 20 ಆನ್‌ಲೈನ್ ಮಾರಾಟಗಾರರಿಗೆ ಭಾರತೀಯ ಮಹಾ ಔಷಧ ನಿಯಂತ್ರಕರು ನೋಟಿಸು ನೀಡಿದ್ದಾರೆ. 

ಪರವಾನಿಗೆ ಇಲ್ಲದೆ ಔಷಧ ಮಾರಾಟ ನಿಷೇಧಿಸುವ ದಿಲ್ಲಿ ಉಚ್ಚ ನ್ಯಾಯಾಲಯದ (Delhi High Court) 2018ರ ಆದೇಶವನ್ನು ಉಲ್ಲೇಖಿಸಿ ಭಾರತೀಯ ಮಹಾ ಔಷಧ ನಿಯಂತ್ರಕ ವಿ.ಜಿ. ಸೋಮಾನಿ ಅವರು ಫೆಬ್ರವರಿ 8ರಂದು ಶೋಕಾಸ್ ನೋಟಿಸು ಜಾರಿಗೊಳಿಸಿದ್ದಾರೆ.

ಆನ್‌ಲೈನ್ ಔಷಧಾಲಯಗಳಿಂದ ಔಷಧಗಳ ಮಾರಾಟದ ಮೇಲೆ ನಿಷೇಧ ವಿಧಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯ (Delhi High Court) ಆದೇಶ ನೀಡಿತ್ತು. ಆನ್‌ಲೈನ್ ಔಷಧ ಮಾರಾಟದಿಂದ ಸ್ವ ಚಿಕಿತ್ಸೆಯ ಅಪಾಯ, ಶಿಫಾರಸು ರಹಿತ ಔಷಧಗಳ ಮಾರಾಟ ಹಾಗೂ ಮನೋಭ್ರಾಮಕ ಔಷಧಗಳ ಮಾರಾಟ ಹೆಚ್ಚಾಗುವ ಸಾಧ್ಯತೆ ಇದೆ ಎಂದು  ಪ್ರತಿಪಾದಿಸಿದ ದೂರುದಾರರೊಬ್ಬರು ಸಲ್ಲಿಸಿದ ಅರ್ಜಿಗೆ ಪ್ರತಿಯಾಗಿ ದಿಲ್ಲಿ ಉಚ್ಚ ನ್ಯಾಯಾಲಯ ಈ ಆದೇಶ ಜಾರಿ ಮಾಡಿತ್ತು.

ಔಷಧಗಳ ಮಾರಾಟ ಹಾಗೂ ವಿತರಣೆಗೆ ಸಂಬಂಧಿತ ರಾಜ್ಯ ಪರವಾನಿಗೆ ಪ್ರಾಧಿಕಾರದಿಂದ ಪರವಾನಿಗೆ ಪಡೆಯಬೇಕು ಎಂದು ಉಲ್ಲೇಖಿಸಿ ಇ ಕಾಮರ್ಸ್ ವೇದಿಕೆಗಳಿಗೆ ಕಳೆದ ವಾರ ನೋಟಿಸು ಜಾರಿ ಮಾಡಲಾಗಿತ್ತು. 

ಔಷಧ ಹಾಗೂ ಪ್ರಸಾದನ ಕಾಯ್ದೆಯ ನಿಯಮಗಳ ಉಲ್ಲಂಘನೆಯ ಕಾರಣಕ್ಕಾಗಿ ತಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಆನ್‌ಲೈನ್ ಮಾರಾಟಗಾರರಿಗೆ ನೋಟಿಸಿನಲ್ಲಿ ಪ್ರಶ್ನಿಸಲಾಗಿದೆ.

ಪ್ರಕರಣದಲ್ಲಿ ಕಂಪೆನಿಗಳು ಪ್ರತಿಕ್ರಿಯೆ ಸಲ್ಲಿಸದೇ ಇದ್ದರೆ, ಮುಂದೆ ಯಾವುದೇ ರೀತಿಯ ನೋಟಿಸು ನೀಡದೆ ಅಗತ್ಯದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭಾರತೀಯ ಮಹಾ ಔಷಧ ನಿಯಂತ್ರಕರ ನೋಟಿಸು ತಿಳಿಸಿದೆ. 

ಇದನ್ನು ಓದಿ:  ಟರ್ಕಿಯಲ್ಲಿ 4.7 ತೀವ್ರತೆಯ ಮತ್ತೊಂದು ಭೂಕಂಪ: ಮೃತರ ಸಂಖ್ಯೆ 34,000ಕ್ಕೆ ಏರಿಕೆ

Similar News