×
Ad

ಬಾಂಗ್ಲಾದೇಶದಿಂದ ಅಂಡಮಾನ್-ನಿಕೋಬಾರ್ ತಲುಪಿದ 69 ರೋಹಿಂಗ್ಯಾಗಳಿದ್ದ ಬೋಟ್

Update: 2023-02-13 22:24 IST

ಪೋರ್ಟ್‌ಬ್ಲೇರ್,ಫೆ.13: ಬಾಂಗ್ಲಾದೇಶದಿಂದ 69 ರೋಹಿಂಗ್ಯಾಗಳನ್ನು ಹೊತ್ತಿದ್ದ ಮೋಟರ್ ಬೋಟ್ ಸೋಮವಾರ ಬೆಳಿಗ್ಗೆ ನಿಕೋಬಾರ್ ಜಿಲ್ಲೆಯನ್ನು ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದರು.

‘ಮಾ-ಬಾಬರ್ ದುವಾ’ ಹೆಸರಿನ ಬೋಟ್ ಬೆಳಿಗ್ಗೆ 10:30ರ ಸುಮಾರಿಗೆ ಕಾರ್ ನಿಕೋಬಾರ್‌ನ ಮಲಕ್ಕಾ ಜೆಟ್ಟಿಗೆ ಆಗಮಿಸಿದೆ. 19 ಪುರುಷರು,22 ಮಹಿಳೆಯರು ಮತ್ತು 28 ಮಕ್ಕಳಿದ್ದ ಬೋಟ್ ಇಂಡೋನೇಶ್ಯಾಕ್ಕೆ ಪ್ರಯಾಣಿಸುತ್ತಿತ್ತು,ಅದರೆ ಕೆಟ್ಟ ಹವಾಮಾನದಿಂದಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ್ ಸಮೂಹಕ್ಕೆ ಬಂದಿದೆ. ಬೋಟ್‌ನಲ್ಲಿ ಇಂಧನವೂ ಖಾಲಿಯಾಗಿದೆ . ಅದರಲ್ಲಿದ್ದವರು ಸುಮಾರು ಎರಡು ವಾರಗಳ ಹಿಂದೆ ಬಾಂಗ್ಲಾದೇಶದ ಪರಿಹಾರ ಶಿಬಿರವೊಂದರಿಂದ ಪರಾರಿಯಾಗಿದ್ದರು ಎಂದು ಅಧಿಕಾರಿಗಳು ಹೇಳಿದರು.

ಈ ವಿಷಯದಲ್ಲಿ ಈಗಲೇ ಪ್ರತಿಕ್ರಿಯಿಸುವುದು ಅವಸರವಾಗುತ್ತದೆ. ವೈದ್ಯಕೀಯ ಅಧಿಕಾರಿಗಳ ತಂಡವೊಂದು ಅವರ ಆರೋಗ್ಯ ಸ್ಥಿತಿಯ ತಪಾಸಣೆಯನ್ನು ನಡೆಸುತ್ತಿದೆ ಎಂದರು.

ತಟರಕ್ಷಣಾ ಪಡೆ,ಪೊಲೀಸ್ ಮತ್ತು ವಿಪತ್ತು ನಿರ್ವಹಣೆ ತಂಡ ಜೆಟ್ಟಿಯಲ್ಲಿ ಉಪಸ್ಥಿತರಿದ್ದರು. ಬೋಟ್‌ನ್ನು ಪ್ರವೇಶಿಸಿದ ಭದ್ರತಾ ಸಿಬ್ಬಂದಿಗಳು ಅದರಲ್ಲಿದ್ದವರಿಗೆ ಆಹಾರ,ನೀರು ಮತ್ತು ಔಷಧಿಗಳನ್ನು ಒದಗಿಸಿದ್ದಾರೆ.

ಈ ಬಗ್ಗೆ ಕೇಂದ್ರ ಗೃಹ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

2020,ಜನವರಿಯಲ್ಲಿ ಬಾಂಗ್ಲಾದೇಶದಿಂದ 66 ರೋಹಿಂಗ್ಯಾಗಳೊಂದಿಗೆ ಬರುತ್ತಿದ್ದ ಬೋಟ್‌ನ್ನು ನಿರ್ಬಂಧಿತ ಉತ್ತರ ಸೆಂಟಿನೆಲ್ ದ್ವೀಪದಿಂದ ಸುಮಾರು 34 ಕಿ.ಮೀ.ದೂರದ ತರ್ಮುಗ್ಲಿ ಬಳಿ ತಡೆಯಲಾಗಿತ್ತು.

ಇದನ್ನು ಓದಿ:  ಮಧ್ಯಪ್ರದೇಶ: ಚರ್ಚ್‌ಗೆ ಬೆಂಕಿ; ಗೋಡೆಯಲ್ಲಿ 'ರಾಮನಾಮ'

Similar News