×
Ad

ಅಮೆರಿಕದಲ್ಲಿ ಶೂಟೌಟ್: ಕನಿಷ್ಠ ಮೂವರು ಸಾವು, ಹಲವರಿಗೆ ಗಾಯ

ಶಂಕಿತ ಹಂತಕ ಆತ್ಮಹತ್ಯೆ

Update: 2023-02-14 10:02 IST

ಈಸ್ಟ್ ಲ್ಯಾನ್ಸಿಂಗ್,ಫೆ.14:   ಇಲ್ಲಿನ ಮಿಶಿಗನ್ ವಿಶ್ವವಿದ್ಯಾನಿಲಯದಲ್ಲಿ(University of Michigan) ಸೋಮವಾರ  ದುಷ್ಕರ್ಮಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ. ಘಟನೆಯ ನಡೆದ ಕೆಲವು ತಾಸುಗಳ ಬಳಿಕ ಶಂಕಿತ ಹಂತಕನು ವಿವಿ ಕ್ಯಾಂಪಸ್‌ನಲ್ಲೇ ತನಗೇ ತಾನೇ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಮಿಶಿಗನ್ ವಿವಿಯ ಬರ್ಕಿ ಹಾಲ್ ಹಾಗೂ ವಿಯೂನಿಯನ್ ಕಟ್ಟಡ, ಈ ಎರಡು  ಕಡೆಗಳಲ್ಲಿ ಹಂತಕನು ಗುಂಡು ಹಾರಾಟ ನಡೆಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಶೂಟೌಟ್‌ನ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಗುಂಡು ಹಾರಾಟ ನಡೆದ ಸ್ಥಳಗಳಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆಂದು ವಿವಿ ಪೊಲೀಸ್ ಠಾಣೆಯ ಹಂಗಾಮಿ ಉಪವರಿಷ್ಠ ಕ್ರಿಸ್ ರೋಝ್ ಮ್ಯಾನ್  ತಿಳಿಸಿದ್ದಾರೆ.

ಗುಂಡುಹಾರಾಟದ ಹಿಂದಿರುವ ಉದ್ದೇಶದ ಬಗ್ಗೆ ತನಿಖಾಧಿಕಾರಿಗಳಿಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಅಲ್ಲದೆ ದಾಳಿಗೆ ಮುನ್ನ ಆತ ಈ ಬಗ್ಗೆ ಯಾವುದೇ ಬೆದರಿಕೆಯನ್ನು ಒಡ್ಡಿರುವುದು ವಿವಿ ಆಡಳಿತಕ್ಕೆ ತಿಳಿದಿಲ್ಲವೆಂದು  ಅವರು ತಿಳಿಸಿದ್ದಾರೆ. ಹಿಂಸಾಚಾರ ನಡೆದ ನಾಲ್ಕು ತಾಸುಗಳ ಬಳಿಕ ಶಂಕಿತ ಹಂತಕನ ಮೃತದೇಹವು ವಿವಿ ಕ್ಯಾಂಪಸ್‌ನಲ್ಲಿ ಪತ್ತೆಯಾಗಿದೆ. ಆತ ತನಗೇ ತಾನೇ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ರೋಝ್ ಮ್ಯಾನ್ ತಿಳಿಸಿದ್ದಾರೆ.

ಇದೊಂದು ಒಬ್ಬನೇ ಹಂತಕನ  ಕೃತ್ಯವಾಗಿದೆಯೆಂದು ಅವರು ಹೇಳಿದ್ದಾರೆ.

ಶೂಟೌಟ್  ಆರಂಭಗೊಂಡ ಮೂರು ತಾಸುಗಳ ಬಳಿಕ ಮಿಶಿಗನ್ ರಾಜ್ಯ ವಿವಿ ಪೊಲೀಸರು

ಶಂಕಿತ ಹಂತಕನ ಮೂರು ಛಾಯಾಚಿತ್ರಗಳನ್ನು ಬಿಡುಗಡೆಗಳಿಸಿದ್ದರು. ವಿವಿಯ ಸಿಸಿ ಕ್ಯಾಮರಾಗಳ ಮೂಲಕ ತೆಗೆಯಲಾದ ಈ  ಛಾಯಾಚಿತ್ರಗಳಲ್ಲಿ ಹಂತಕನು ಮೆಟ್ಟಲುಗಳನ್ನೇರಿ  ಕಟ್ಟಡದೊಳಗೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿದೆ. ಆತ  ಜಾಕೆಟ್, ಜೀನ್ಸ್, ಬೇಸ್‌ಬಾಲ್ ಕ್ಯಾಪ್ ಹಾಗೂ  ಮುಖದ ಕೆಳಗೆ ಕಪ್ಪು ಮಾಸ್ಕ್ ಧರಿಸಿರುವುದು ಕಂಡುಬಂದಿದೆ.

ಮಿಶಿಗನ್ ಓಕ್‌ಲ್ಯಾಂಡ್ ಕೌಂಟಿಯಲ್ಲಿ ಆಕ್ಸ್‌ಫರ್ಡ್ ಹೈಸ್ಕೂಲ್‌ನಲ್ಲಿ ನವೆಂಬರ್ 30ರಂದು ಹದಿಹರೆಯದ ವಿದ್ಯಾರ್ಥಿಯೊಬ್ಬ ನಡೆಸಿದ ಶೂಟೌಟ್‌ನಲ್ಲಿ  ನಾಲ್ಕು ಮಂದಿ ವಿದ್ಯಾರ್ಥಿಗಳು ಮೃತಪಟ್ಟು ಶಿಕ್ಷಕಿ ಸೇರಿದಂತೆ ಏಳು ಮಂದಿ  ಗಾಯಗೊಂಡ ಘಟನೆಯ 14 ತಿಂಗಳುಗಳ ಬಳಿಕ  ಈ ಹಿಂಸಾಚಾರ ನಡೆದಿದೆ.

Similar News