ಟರ್ಕಿ - ಸಿರಿಯಾ ಭೂಕಂಪ: ಇಬ್ಬರು ಬಾಲಕಿಯರ ಪತ್ತೆಗೆ ನೆರವಾದ ಎನ್‌ಡಿಆರ್‌ಎಫ್ ನ ರೋಮಿಯೊ-ಜ್ಯೂಲಿಯೆಟ್ !

Update: 2023-02-14 04:43 GMT

ಹೊಸದಿಲ್ಲಿ: ಭೀಕರ ಭೂಕಂಪದಿಂದ ಕಂಗೆಟ್ಟಿರುವ ಟರ್ಕಿ- ಸಿರಿಯಾದಲ್ಲಿ ಅವಶೇಷಗಳಡಿ ಸಿಲುಕಿಕೊಂಡಿದ್ದ ಇಬ್ಬರು ಬಾಲಕಿಯರ ಪತ್ತೆಗೆ ನೆರವಾಗಿ ಅವರ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್‌ಡಿಆರ್‌ಎಫ್)ಯ ಶ್ವಾನದಳದ ರೋಮಿಯೊ ಹಾಗೂ ಜ್ಯೂಲಿಯೆಟ್ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿವೆ.

ಮೈಕೊರೆಯುವ ಚಳಿಯ ನಡುವೆಯೂ, ಕುಸಿದು ಬಿದ್ದ ಕಟ್ಟಡಗಳಡಿ ಸಿಲುಕಿಕೊಂಡಿರುವವರ ರಕ್ಷಣೆಗಾಗಿ ನಿರಂತರ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಎನ್‌ಡಿಆರ್‌ಎಫ್ ಸಿಬ್ಬಂದಿಗೆ ಅವಶೇಷಗಳಡಿ ಬಾಲಕಿಯರು ಸಿಕ್ಕಿ ಹಾಕಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಒದಗಿಸಿದ್ದು ಈ ಎರಡು ಶ್ವಾನಗಳು. ಈ ಲ್ಯಾಬ್ರಡೋರ್ ಜೋಡಿ, ಅವಶೇಷಗಳಡಿ ಶೋಧ ಕಾರ್ಯ ನಡೆಸಿ ಒಂದೆಡೆ ನಿಂತು ಬೊಗಳಲು ಆರಂಭಿಸಿದವು. ಈ ಸ್ಥಳದಲ್ಲಿ ಯಂತ್ರಗಳನ್ನು ಸಜ್ಜುಗೊಳಿಸಿ ಕಾಂಕ್ರಿಟ್ ರಾಶಿಗಳನ್ನು ಕೊರೆಯುವ ಕಾರ್ಯಾಚರಣೆ ಆರಂಭಿಸಿದರು. ಹಲವು ಗಂಟೆಗಳ ಕಾಲ ಅವಶೇಷ ತೆಗೆದ ಬಳಿಕ ಬರೇನ್ ಎಂಬ ಆರು ವರ್ಷದ ಬಾಲಕಿ ಉಸಿರಾಡುತ್ತಿದ್ದುದು ಕಂಡುಬಂತು.

ಕೊಲ್ಕತ್ತಾದ ಎನ್‌ಡಿಆರ್‌ಎಫ್‌ನ ಎರಡನೇ ಬೆಟಾಲಿಯನ್‌ಗೆ ಸಂಬಂಧಿಸಿದ ಎರಡು ಶ್ವಾನಗಳು ಟರ್ಕಿಯ ನರ್ದಗಿಯಲ್ಲಿ ಈ ರಕ್ಷಣಾ ತಂಡಕ್ಕೆ ಇಬ್ಬರು ಬಾಲಕಿಯರನ್ನು ರಕ್ಷಿಸಲು ನೆರವಾದವು. ಭಾರತ ಸರ್ಕಾರ ಭೂಕಂಪಪೀಡಿತ ಪ್ರದೇಶಕ್ಕೆ ಗಾಜಿಯಾಬಾದ್, ಕೊಲ್ಕತ್ತಾ ಹಾಗೂ ವಾರಣಾಸಿ ಹೀಗೆ ಮೂರು ಎನ್‌ಡಿಆರ್‌ಎಫ್ ತಂಡಗಳನ್ನು ಕಳುಹಿಸಿಕೊಟ್ಟಿದೆ. ಹನಿ ಮತ್ತು ರ್ಯಾಂಬೊ ಎಂಬ ಇತರ ಎರಡು ಶ್ವಾನಗಳು ಕೂಡಾ ಕಾರ್ಯಾಚರಣೆಗೆ ಆಗಮಿಸಿವೆ.
ಇದುವರೆಗೆ ನಾಲ್ಕು ಶ್ವಾನಗಳು ನರ್ದಗಿ ಮತ್ತು ಅಂತಕ್ಯದಲ್ಲಿ ಅವಶೇಷಗಳಡಿಯಿಂದ 45 ಶವಗಳನ್ನು ಹೊರತೆಗೆಯಲು ನೆರವಾಗಿವೆ. ಬರೇನ್ ಎಂಬ ಬಾಲಕಿಯನ್ನು ಫೆಬ್ರುವರಿ 9ರಂದು ರಕ್ಷಿಸಿದ್ದರೆ, ಮಿರಾಯ್ ಕರ್ಟಾಸ್ ಎಂಬ ಒಂಬತ್ತು ವರ್ಷದ ಬಾಲಕಿಯನ್ನು ಮರುದಿನ ರಕ್ಷಿಸಲಾಯಿತು.

Similar News