ಬೀಡಾಡಿ ದನಗಳು ಬೆಳೆ ನಾಶ ಮಾತ್ರವಲ್ಲ; ದೇಶದ ಭವಿಷ್ಯವನ್ನೂ ನಾಶ ಮಾಡುತ್ತಿವೆ: ಬಿಜೆಪಿ ಸಂಸದ ವರುಣ್ ಗಾಂಧಿ

Update: 2023-02-14 07:24 GMT

ಪಿಲ್ಭಿಟ್: ಬೀಡಾಡಿ ದನಗಳ ಉಪಟಳದ ಕುರಿತು ಪ್ರಸ್ತಾಪಿಸಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ಬೀಡಾಡಿ ದನಗಳು ರೈತರ ಬೆಳೆ ನಾಶ ಮಾತ್ರ ಮಾಡುತ್ತಿಲ್ಲ; ದೇಶದ ಭವಿಷ್ಯವನ್ನೂ ನಾಶ ಮಾಡುತ್ತಿವೆ ಎಂದು ಕಿಡಿ ಕಾರಿದ್ದಾರೆ. ಬಿಲ್ಸಂದಾದ ಬಮ್ರೌಲಿ ಗ್ರಾಮ ಹಾಗೂ ಬರ್ಖೇಡಾದ ಮಾಧ್ವಪುರ್ ಗ್ರಾಮದಲ್ಲಿ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. 

"ಬಿಡಾಡಿ ದನಗಳು ರೈತರ ಬೆಳೆಯನ್ನು ಮಾತ್ರ ತಿನ್ನುತ್ತಿಲ್ಲ; ದೇಶದ ಭವಿಷ್ಯವನ್ನೂ ತಿನ್ನುತ್ತಿವೆ. ಇದಕ್ಕೆ ಕಾರಣವಾಗಿರುವ ವ್ಯಕ್ತಿಗಳನ್ನು ಉತ್ತರದಾಯಿಗಳನ್ನಾಗಿಸಬೇಕು. ದೇಶದ ಬಹುತೇಕ ರೈತರು ಸಾಲದಲ್ಲಿದ್ದಾರೆ ಮತ್ತು ಈ ಬಗೆಯ ದೌರ್ಜನ್ಯವನ್ನು ಸಹಿಸಲಾಗುವುದಿಲ್ಲ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ವರುಣ್ ಗಾಂಧಿ ಕಚೇರಿಯು, ಈ ದೇಶದ ಬಗ್ಗೆ ಚಿಂತಿಸುವ, ಅರ್ಥ ಮಾಡಿಕೊಳ್ಳುವ ಮತ್ತು ಕಾಳಜಿ ವಹಿಸುವ ಎಲ್ಲರೂ ವ್ಯವಸ್ಥೆಯಲ್ಲಿ ಸುಧಾರಣೆಯಾಗುವುದು ಬಹು ಮುಖ್ಯ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

"ಈ ದೇಶದಲ್ಲಿ ಸಾಮಾನ್ಯ ಜನತೆಗೆ ಹೆಚ್ಚು ಹಕ್ಕಿದೆ. ಯಾಕೆಂದರೆ, ರೈತರು ದೇಶಕ್ಕೆ ಉಣಿಸುವ ಕೆಲಸ ಮಾಡುತ್ತಾರೆ, ಕೂಲಿ ಕಾರ್ಮಿಕರು ದೇಶವನ್ನು ನಿರ್ಮಿಸುವ ಕೆಲಸ ಮಾಡುತ್ತಾರೆ, ನಮ್ಮ ದೇಶದ ಭವಿಷ್ಯವನ್ನು ನಿರ್ಧರಿಸುವ ಕೆಲಸವನ್ನು ಯುವಕರು ಮಾಡುತ್ತಾರೆ ಮತ್ತು ಮಧ್ಯಮ ವರ್ಗವು ದೇಶದ ಆರ್ಥಿಕ ಬೆನ್ನೆಲುಬಾಗಿದೆ. ಆದರೆ, ಅವರ ಹಕ್ಕುಗಳು ಮೊಟಕಾಗುತ್ತಿರುವುದು ದುರದೃಷ್ಟಕರ ಮತ್ತು ಕಳವಳದ ಸಂಗತಿಯಾಗಿದೆ" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇದರೊಂದಿಗೆ ಸಾಮಾನ್ಯ ಜನತೆ ಸಾಲ ಪಡೆಯಲು ಹರಸಾಹಸ ಮಾಡುತ್ತಾರೆ. ಅದಕ್ಕಾಗಿ ಬ್ಯಾಂಕ್‌ನಿಂದ ಬ್ಯಾಂಕಿಗೆ ಅಲೆದಾಡುತ್ತಾರೆ. ಇದೇ ವೇಳೆ ಸಿರಿವಂತರು ಅದನ್ನು ಸುಲಭವಾಗಿ ಪಡೆಯುತ್ತಾರೆ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ದೇಶದ ದೊಡ್ಡ ಸುಸ್ತಿದಾರರು ಗೌರವದಿಂದ ಜೀವನ ನಡೆಸುತ್ತಿದ್ದಾರೆ. ಆದರೆ, ಸಾಮಾನ್ಯ ವ್ಯಕ್ತಿ ಸಾಲ ಮರುಪಾವತಿಸಲು ವಿಳಂಬ ಮಾಡಿದರೆ ಅವನನ್ನು ಅವಮಾನಿಸಲಾಗುತ್ತದೆ ಮತ್ತು ಅವನ ಆಸ್ತಿಯನ್ನು ಮುಟ್ಟುಗೋಲೂ ಹಾಕಿಕೊಳ್ಳಲಾಗುತ್ತದೆ ಎಂದು ಹೇಳಿರುವ ವರುಣ್ ಗಾಂಧಿ, " ನಾನು ಯಾರನ್ನೂ ಟೀಕಿಸುತ್ತಿಲ್ಲ. ಆದರೆ, ಇಂತಹ ವ್ಯವಸ್ಥೆಯ ಬಗ್ಗೆ ನಾನು ಕಳವಳಗೊಂಡಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ.

ಧಾರ್ಮಿಕ ರಾಜಕೀಯದ ಕುರಿತು ಮಾತನಾಡುವವರು ಭಗವಾನ್ ಶ್ರೀ ರಾಮರಿಂದ ಕಲಿಯಬೇಕಿದೆ ಎಂದು ವರುಣ್ ಗಾಂಧಿ ಪರೋಕ್ಷವಾಗಿ ಸ್ವಪಕ್ಷ ಬಿಜೆಪಿಯನ್ನು ಟೀಕಿಸಿದ್ದಾರೆ.

Similar News